ಸುರತ್ಕಲ್: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಜೊತೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರು ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ವಿವಿಧೆಡೆ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದರು.
ಮುಕ್ಕ ಮಸೀದಿ, ಭಂಡಾರ ಮನೆ, ಮುಕ್ಕದ ಸತ್ಯಧರ್ಮ ದೇವಿ ದೇವಸ್ಥಾನ, ಗಣೇಶಪುರ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುರತ್ಕಲ್ ಪೇಟೆ, ಕಾಟಿಪಳ್ಳ ಪೇಟೆ, ಚೊಕ್ಕಬೆಟ್ಟು ಸರ್ಕಲ್ ಗಳಲ್ಲಿ ಸಾರ್ವಜನಿಕರಲ್ಲಿ ಅಂಗಡಿ, ರಿಕ್ಷಾ ಚಾಲಕರ ಬಳಿಗೆ ಹೋಗಿ ಮತ ಯಾಚಿಸಿದರು. ಬಳಿಕ ಕಾಟಿಪಳ್ಳ ಸರ್ಕಲ್ ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ನಿಂತ ನೀರಾಗಿದ್ದು ಈ ಬಾರಿ ಅವಕಾಶ ನೀಡಿದಲ್ಲಿ ಪ್ರವಾಸೋದ್ಯಮ, ಶೈಕ್ಷಣಿಕ, ಉದ್ಯಮ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಜಿಲ್ಲೆಯಲ್ಲಿ ಮುಂಚೂಣಿಗೆ ತರಲು ಶ್ರಮವಹಿಸಿ ದುಡಿಯುತ್ತೇನೆ” ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ರಾಜಶೇಖರ್ ಕೋಟ್ಯಾನ್, ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ್ ಕುಳಾಯಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಶಮೀರ್ ಕಾಟಿಪಳ್ಳ, ಜಲೀಲ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.