ಎ.3ರಂದು ಪದ್ಮರಾಜ್ ಆರ್. ನಾಮಪತ್ರ ಸಲ್ಲಿಕೆ.
ಮಂಗಳೂರು: “ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಅವರು ಎ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬಳಿಕ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಚಾರ ಸಭೆ ನಡೆಯಲಿದೆ. ಈ ಬಾರಿ ನಮ್ಮ ಅಭ್ಯರ್ಥಿ 50ರಿಂದ 70 ಸಾವಿರ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ” ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಚಾರ ಸಭೆಯನ್ನು ಪುತ್ತೂರಿನಲ್ಲಿ ನಡೆಸಲು ನಿರ್ಧರಿಸಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲೂ ಚುನಾವಣೆ ಉಸ್ತುವಾರಿ ನೋಡಿಕೊಳ್ಳಲು ಕಾಂಗ್ರೆಸ್ ಪ್ರಮುಖರನ್ನು ನೇಮಕ ಮಾಡಲಾಗಿದೆ. ಈಗಾಗಲೇ ಪಕ್ಷದ ನಾಯಕರು ಅದರಲ್ಲಿ ತೊಡಗಿಕೊಂಡಿದ್ದಾರೆ. ಕೆಪಿಸಿಸಿ ವತಿಯಿಂದ ಚುನಾವಣೆ ಉಸ್ತುವಾರಿಯನ್ನಾಗಿ ಮಾಜಿ ಸಚಿವ ರಮಾನಾಥ್ ರೈ ಅವರನ್ನು ನೇಮಕ ಮಾಡಲಾಗಿದೆ” ಎಂದರು.
ಬಳಿಕ ಮಾತಾಡಿದ ಮಾಜಿ ಸಚಿವ ಬಿ. ರಮಾನಾಥ್ ರೈ ಅವರು, “ಕಾಂಗ್ರೆಸ್ ಪಕ್ಷ ಅನೇಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದೆ. ದೇಶದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಇತಿಹಾಸ ನಿರ್ಮಿಸಲು ಜನರು ಒಂದಾಗಬೇಕಿದೆ. ಕಾಂಗ್ರೆಸ್ ಸರಕಾರ ದೇಶದಲ್ಲಿ ಜಾರಿಗೆ ಬಂದರೆ ಜನರಿಗೆ ಬೇಕಾದ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಇದು ಕೇವಲ ಭರವಸೆಯಲ್ಲ, ನೂರಕ್ಕೆ ನೂರರಷ್ಟು ಜಾರಿಗೆ ಬರುವಂತದ್ದು. ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿಯವರೆಗೆ ಅಭಿವೃದ್ಧಿ ಆಗಿದ್ದರೆ ಅದು ಕಾಂಗ್ರೆಸ್ ಸರಕಾರ ಇದ್ದಾಗ ಮಾತ್ರ. ಹೀಗಾಗಿ ಈ ಬಾರಿ ಪದ್ಮರಾಜ್ ಆರ್. ಅವರನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ದ.ಕ. ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಬಿ. ರಮಾನಾಥ್ ರೈ, ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಅಧ್ಯಕ್ಷ ಮಂಜುನಾಥ್ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್., ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಅಭಯಚಂದ್ರ ಜೈನ್, ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.