ಮಾ.24ರಂದು ಉಚಿತ ನೇತ್ರ ತಪಾಸಣಾ ಶಿಬಿರ
ಸುರತ್ಕಲ್: “ಶಾರದಾ ಸೇವಾ ಟ್ರಸ್ಟ್ ಸಂಸ್ಥೆಯು ಈ ಬಾರಿ 50ನೇ ವರ್ಷದ ಸುವರ್ಣ ಮಹೋತ್ಸವವನ್ನು
ಆಚರಿಸಲು ಸಜ್ಜಾಗಿದೆ. ಅದಕ್ಕಾಗಿ ಈ ವರ್ಷ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು
ಎಂಬ ಉದ್ದೇಶದಿಂದ ಶ್ರೀ ಶಾರದಾ ಸುವರ್ಣ ಮಹೋತ್ಸವ ಸಮಿತಿ, ಸುರತ್ಕಲ್ ಎಂಬ ಹೊಸ ಸಮಿತಿಯನ್ನು ರಚಿಸಿ, ಸುವರ್ಣ ಮಹೋತ್ಸವದ ಅಂಗವಾಗಿ ಈ ವರ್ಷದ ನವರಾತ್ರಿ ಆಚರಣೆಯ
ಮೊದಲು ಪ್ರತೀ ತಿಂಗಳು ಒಂದೊಂದು ಕಾರ್ಯಕ್ರಮ ರೂಪಿಸಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ” ಎಂದು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಎನ್. ಕೃಷ್ಣ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಶ್ರೀ ಶಾರದಾ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಖ್ಯಾತ ಜ್ಯೋತಿಷಿ ನಾಗೇಂದ್ರ
ಭಾರದ್ವಾಜ್ ಮತ್ತು ಗೌರವಾಧ್ಯಕ್ಷರಾಗಿ ಸ್ಥಳೀಯ ಶಾಸಕರು ಹಾಗೂ ಆಸುಪಾಸಿನ ಕೆಲವು ಗಣ್ಯ ವ್ಯಕ್ತಿಗಳು ಹಾಗೂ ಸಂಘಸಂಸ್ಥೆಗಳನ್ನು ಸೇರಿಸಿಕೊಳ್ಳಬೇಕೆಂಬ ಉದ್ದೇಶವನ್ನೂ ಹೊಂದಿದ್ದೇವೆ” ಎಂದವರು ಹೇಳಿದರು.
ಬಳಿಕ ಮಾತಾಡಿದ ಶ್ರೀ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ವೈ.ರಾಘವೇಂದ್ರ ರಾವ್ ಅವರು, “ಈ ವರ್ಷದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಸುವರ್ಣ ಮಹೋತ್ಸವ ಸಮಿತಿಯ ವತಿಯಿಂದಲೇ ನಡೆಯಲಿದೆ. ಈ ಸುವರ್ಣ ಸಮಿತಿಯ ಪದಾಧಿಕಾರಿಗಳು ಹಾಲಿ ಇರುವ ಸಾರ್ವಜನಿಕ ಶ್ರೀಶಾರದಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳೇ ಮುಂದುವರಿಯುತ್ತಾರೆ ಹಾಗೂ ಶ್ರೀ ಶಾರದಾ ಸೇವಾ ಟ್ರಸ್ಟ್(ರಿ)ನ ಪದಾಧಿಕಾರಿಗಳು, ಸಮಿತಿಯ ಎಲ್ಲಾ ಸದಸ್ಯರೂ ಇದರೊಂದಿಗೆ ಭಾಗಿಯಾಗುತ್ತಾರೆ. ಮಾರ್ಚ್ 24ರಂದು ಭಾನುವಾರ ಈ ಸುವರ್ಣ ಮಹೋತ್ಸವ ಸಮಿತಿಯ ಸಾಂಕೇತಿಕ ಉದ್ಘಾಟನೆ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಶಾರದಾ ಮಂದಿರದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮವು ಎಂಸಿಎಫ್ ಪ್ರಾಯೋಜಕತ್ವದಲ್ಲಿ ನಡೆಯಲಿದ್ದು, ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರ ವತಿಯಿಂದ ನಡೆಯಲಿದೆ. ಶಿಬಿರದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ, ಅಗತ್ಯ ಉಳ್ಳವರಿಗೆ ಉಚಿತವಾಗಿ ಕನ್ನಡಕ ಮತ್ತು ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಲಾಗುತ್ತದೆ. ಈ ಶಿಬಿರದ ಪ್ರಯೋಜನವನ್ನು ಹೆಚ್ಚಿನ ಸಾರ್ವಜನಿಕರು
ಪಡೆದುಕೊಳ್ಳಬೇಕು” ಎಂದು ಮನವಿ ಮಾಡಿದರು.
ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ, ಸಾಮರಸ್ಯ ಬೆಳೆಸುವ, ನಮ್ಮ ಸಂಸ್ಕೃತಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವ ಉದ್ದೇಶದ ಬಗ್ಗೆ ಚರ್ಚಿಸಿ, 1975ರಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಎಂಬ
ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅದೇ ವರ್ಷ ನವರಾತ್ರಿ ಸಮಯದಲ್ಲಿ ಎರಡು ದಿವಸಗಳ ಶಾರದಾ ಪೂಜೆಯನ್ನೂ ಸಾರ್ವಜನಿಕ ಉತ್ಸವವಾಗಿ ಆಚರಿಸಿದರು. ಕಳೆದ 49 ವರ್ಷಗಳಲ್ಲಿ ಈ ಶಾರದಾ ಮಹೋತ್ಸವವು ಅತ್ಯಂತ ಸಂಭಮೋಲ್ಲಾಸದಿಂದ ಶಿಸ್ತುಬದ್ಧವಾಗಿ ನಡೆದುಬಂದಿರುತ್ತದೆ. ತದನಂತರ ಈ ಸಂಸ್ಥೆಯು ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಮಾಡುವ ಉದ್ದೇಶದಿಂದ ಶ್ರೀ ಶಾರದಾ ಸೇವಾ ಟ್ರಸ್ಟ್ ಎಂಬ ರಿಜಿಸ್ಟರ್ಡ್ ಸಂಸ್ಥೆಯನ್ನು 1983ರಲ್ಲಿ ಸ್ಥಾಪನೆ ಮಾಡಲಾಯಿತು” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ಶಾರದಾ ಮಾತೃಮಂಡಳಿ ಅಧ್ಯಕ್ಷೆ ಅನುರಾಧ ರಾಜು, ಕಾರ್ಯದರ್ಶಿ ಸುನೀತಾ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.