ಪಣಂಬೂರು ಬೀಚ್ “ಕಡಲೋತ್ಸವ”ದಲ್ಲಿ ದುರಂತ, ಮೂವರು ಯುವಕರು ಸಮುದ್ರಪಾಲು!

ಸುರತ್ಕಲ್: ಪಣಂಬೂರು ಬೀಚ್ ವಿಹಾರಕ್ಕೆ ಕುಟುಂಬ ಸಮೇತ ಆಗಮಿಸಿದ್ದ ಬಜ್ಪೆ ಪೋರ್ಕೋಡಿ ನಿವಾಸಿಗಳಾದ ಮಿಲನ್(20), ಲಿಖಿತ್(18), ನಾಗರಾಜ್(24)ಸಮುದ್ರ ಪಾಲಾದ ಘಟನೆ ಆದಿತ್ಯವಾರ ಸಂಜೆ ನಡೆದಿದೆ. ಬಜ್ಪೆ ಸಮೀಪದ ಪೊರ್ಕೋಡಿಯ ಯುವಕರು ಸಮುದ್ರದಲ್ಲಿ ನಾಪತ್ತೆಯಾಗಿದ್ದು ಕುಟುಂಬ ಸದಸ್ಯರ ರೋಧನ ಮುಗಿಲು ಮುಟ್ಟಿದೆ.

ಘಟನೆಯ ವಿವರ:
ಪಣಂಬೂರು ಬೀಚ್ ನಲ್ಲಿ ಕಡಲೋತ್ಸವ ಆಯೋಜನೆಗೊಂಡಿತ್ತು. ಪ್ರತಿನಿತ್ಯ ಸಾವಿರಾರು ಮಂದಿ ಬೀಚ್ ಉತ್ಸವಕ್ಕೆ ಆಗಮಿಸುತ್ತಿದ್ದು ರವಿವಾರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಭಾರೀ ಗಾಳಿ ತೂಫಾನ್ ಇದ್ದುದರಿಂದ ಕಡಲಿನ ಅಬ್ಬರ ಹೆಚ್ಚಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಬೀಚ್ ನಲ್ಲಿ ಸಾಹಸಿ ಕ್ರೀಡೆಗಳನ್ನು ಬಂದ್ ಮಾಡಲಾಗಿತ್ತು. ಪ್ರವಾಸಿಗರನ್ನು ಸಮುದ್ರಕ್ಕೆ ಇಳಿಯದಂತೆ ನೋಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಆದರೆ ಯುವಕರು ಸೆಕ್ಯೂರಿಟಿ ಗಾರ್ಡ್ ಗಳ ಕಣ್ಣು ತಪ್ಪಿಸಿ ವೇದಿಕೆ ನಿರ್ಮಿಸಿದ್ದ ಸ್ಥಳದಿಂದ ದೂರದಲ್ಲಿ ಸಮುದ್ರಕ್ಕೆ ಈಜಾಡಲು ಹಾರಿದ್ದು ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪಣಂಬೂರು ಪೊಲೀಸರು ದೌಡಾಯಿಸಿದ್ದು ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ. ಕೆಲವು ದಿನಗಳ ಹಿಂದೆ ಹಳೆಯಂಗಡಿ ಬಳಿ ನದಿಯಲ್ಲಿ ಸುರತ್ಕಲ್ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಮಾಸುವ ಮುನ್ನವೇ ಮತ್ತೆ ಅಂತದ್ದೇ ಘಟನೆ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!