“ಅಯೋಧ್ಯೆ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಉಳ್ಳಾಲದಲ್ಲಿ ಸರ್ವಧರ್ಮೀಯರ ಸಹಕಾರದಿಂದ ಸಂಭ್ರಮದ ವಾತಾವರಣ” -ಭಗವಾನ್ ದಾಸ್ ತೊಕ್ಕೊಟ್ಟು

 

4,000 ಮೋತಿ ಕೇಶರ್ ಲಡ್ಡು ಹಂಚಿದ ಅಕ್ಷರ ಕನ್ ಸ್ಟ್ರಕ್ಷನ್ ಸಂಸ್ಥೆ.

ಉಳ್ಳಾಲ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ನ ಪ್ರತಿಷ್ಠಾಪನೆಗೆ ಉಳ್ಳಾಲ- ತೊಕ್ಕೊಟ್ಟು ವಿನಾದ್ಯಂತ ಸಂಭ್ರಮ ಮನೆ ಮಾಡಿದ್ದು, ಎಲ್ಲಾ ಜಾತಿಮತ ಬಾಂಧವರ ಸಹಕಾರದಿಂದ ಇಂತಹ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಪ್ರೀತಿ- ತಾಳ್ಮೆಯಿಂದ ಬಾಳಲಿದ್ದಾರೆ ಎಂದು ಉಳ್ಳಾಲ ನಗರಸಭೆ ಮಾಜಿ ಸದಸ್ಯ ಭಗವಾನ್ ದಾಸ್ ತೊಕ್ಕೊಟ್ಟು ಹೇಳಿದ್ದಾರೆ.
ತೊಕ್ಕೊಟ್ಟು ಒಳಪೇಟೆ, ಉಳ್ಳಾಲಬೈಲ್ ಸುತ್ತಮುತ್ತ ಅಕ್ಷರ ಕನ್ ಸ್ಟ್ರಕ್ಷನ್ಸ್ ಬೆಂಗಳೂರು ಹಾಗೂ ತೊಕ್ಕೊಟ್ಟು ಒಳಪೇಟೆ ನಿವಾಸಿಗಳು ಸಾರ್ವಜನಿಕರಿಗೆ ಮೋತಿ ಕೇಶರ್ ಲಡ್ಡು ಹಾಗೂ ಪಾನಕ ವಿತರಿಸಿ ಮಾತನಾಡಿದರು.
500 ವರ್ಷಗಳ ದೇಶದ ಹಿಂದೂಗಳ ಬೇಡಿಕೆಗೆ ಇಂದು ಸಫಲತೆಯ ಕ್ಷಣವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ಕುಟುಂಬವೊಂದು ಹಲವು ವರ್ಷಗಳಿಂದ ವೃತಾಚರಣೆಯಿಂದ ಕುಳಿತಿರುವುದ‌ನ್ನು ಸ್ಮರಿಸಬೇಕಿದ್ದು, ಇದೊಂದು ಇಡೀ ರಾಷ್ಟ್ರದ ಸ್ವಾಭಿಮಾನ ಹಾಗೂ ಹಿಂದೂಗಳ ಐಕ್ಯತೆಯನ್ನು ಎತ್ತಿಹಿಡಿಯುವ ದಿನವಾಗಿದೆ. ಈ ಕ್ಷಣವನ್ನು ಉತ್ಸವಪೂರಿತವಾಗಿ ಆಚರಿಸುವ ಉದ್ದೇಶದಿಂದ ತೊಕ್ಕೊಟ್ಟು ಜಂಕ್ಷನ್, ಒಳಪೇಟೆ , ಉಳ್ಳಾಲಬೈಲ್, ದೇರಳಕಟ್ಟೆ, ಹರೇಕಳ ಭಾಗದಲ್ಲಿ ಅಕ್ಷರ ಕನ್ ಸ್ಟ್ರಕ್ಷನ್ ಸಂಸ್ಥೆ ಭಕ್ತಿಪೂರ್ವಕವಾಗಿ ನೀಡಿರುವ ಲಡ್ಡು ಸಾರ್ವಜನಿಕರಿಗೆ ವಿತರಿಸಲಾಗಿದೆ. ಎಲ್ಲರೂ ಸ್ವೀಕರಿಸಿ ಅಯೋಧ್ಯೆ ಶ್ರೀರಾಮನ ಜನ್ಮಸ್ಥಾನಕ್ಕೆ ಗೌರವ ತೋರಿಸಿದ್ದಾರೆ. ಇಂತಹ ಅದ್ಭುತ ವಾತಾವರಣ ಉಳ್ಳಾಲದಲ್ಲಿ ಪ್ರಥಮಬಾರಿ ಮನೆಮಾಡಿದ್ದು, ಮುಂದೆ ಪ್ರತಿದಿನವೂ ಎಲ್ಲರೂ ಒಗ್ಗಟ್ಟಾಗಿ ಬಾಳುವ ಸಂದೇಶವನ್ನು ಈ ದಿನ ಸಾರಿದೆ ಎಂದರು.
ಅಕ್ಷರ ಕನ್ಸ್ಟ್ರಕ್ಷನ್ಸ್ ಪ್ರಬಂಧಕ ಪುಷ್ಪರಾಜ್ ಪಾವೂರು ಮಾತನಾಡಿ, ಉಳ್ಳಾಲ ತಾಲೂಕಿನಾದ್ಯಂತ ವಿವಿದೆಡೆ 4,000 ಲಡ್ಡುಗಳನ್ನು ವೆಂಕಟೇಶ್ ಅವರ ಮಾಲೀಕತ್ವದ ಅಕ್ಷರ ಕನ್ ಸ್ಟ್ರಕ್ಷನ್ಸ್ ಸಂಸ್ಥೆ ಹಂಚಿದ್ದು, ಇದೊಂದು ಅಭೂತಪೂರ್ವ ಕ್ಷಣವಾಗಿದೆ. ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನೆ 500 ವರ್ಷಗಳಿಂದ ಹಿಂದೂಗಳ ತಪಸ್ಸಾಗಿದ್ದು , ಮಂದಿರ ಸ್ಥಾಪನೆ ಮೂಲಕ ದೇಶದುದ್ದಕ್ಕೂ ಜನತೆಗೆ ಸುಖ, ಶಾಂತಿ, ನೆಮ್ಮದಿ ಕರುಣೆಯಾಗಲಿ ಎಂದರು.

ಈ ಸಂದರ್ಭ ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಅಯ್ಯಪ್ಪ ದೇವಸ್ಥಾನದ ಗುರುಸ್ವಾಮಿ ವಿಶ್ವನಾಥ್, ತೊಕ್ಕೊಟ್ಟು ಒಳಪೇಟೆಯ ಪ್ರಕಾಶ್ ಮಣಿ, ಸೀತಾರಾಮ್ ಪೂಜಾರಿ, ಅಜಿತ್ ಕುಮಾರ್ ತೊಕ್ಕೊಟ್ಟು, ಲಕ್ಷ್ಮಣ್ ಕರ್ಕೇರ, ಕಮಲಾಕ್ಷ ತೊಕ್ಕೊಟ್ಟು, ಮೋಹನದಾಸ್ ಕೃಷ್ಣನಗರ, ಸುಮಲತಾ ಪಿ.,
ಧಕ್ಷರಾಜ್ ಹರೇಕಳ, ಪ್ರವೀಣ್ , ನವೀನ್ ಭಂಡಾರಿ ಉಳ್ಳಾಲಬೈಲ್ , ಕೌಶಿಕ್ ಉಳ್ಳಾಲ, ಧಕ್ಷ ಯುವ ಬಳಗದ ಚಿಂತನ್ , ವಿಶ್ವನಾಥ್ ಗ್ರಾಮಚಾವಡಿ, ಶಿವರಾಜ್, ಸುನಿಲ್, ದಿನೇಶ್, ನಿಖಿಲ್ , ಪ್ರಶಾಂತ್ ,ಲಿಖಿತ್, ಸುಷ್ಮಾ , ಗುರುಸ್ವಾಮಿ ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.

200 ಕೆ.ಜಿ ತೂಕದ 4,000 ಮೋಧಿ ಕೇಶರ್ ಲಡ್ಡುಗಳನ್ನು ಉಳ್ಳಾಲ ತಾಲೂಕಿನ ವಿವಿದೆಡೆ ಅಕ್ಷರ ಕನ್ ಸ್ಟ್ರಕ್ಷನ್ಸ್ ಸಂಸ್ಥೆ ವಿತರಿಸಿತು. ತೊಕ್ಕೊಟ್ಟು ಒಳಪೇಟೆ, ಉಳ್ಳಾಲಬೈಲ್, ಗ್ರಾಮಚಾವಡಿ ಧಕ್ಷ ಯುವಬಳಗ, ನಾಗಮೂಲೆ ಬಬ್ಬುಸ್ವಾಮಿ ದೈವಸ್ಥಾನ, ನೇತ್ರಾವತಿ ಫ್ರೆಂಡ್ಸ್ ಕಡವಿನಬಳಿ, ದೇರಳಕಟ್ಟೆ ಅಯ್ಯಪ್ಪ ಭಜನಾಮಂದಿರ ಬಳಿ ಲಡ್ಡು ಹಾಗೂ ಪಾನಕ ವಿತರಿಸಲಾಯಿತು.

error: Content is protected !!