“ವಿದ್ಯಾರ್ಥಿಗಳು ಮೌನಿಗಳಾಗಬಾರದು ಪ್ರಶ್ನಿಸುವವರಾಗಬೇಕು” -ವಿಜಯಲಕ್ಷ್ಮಿ ಶಿಬರೂರು

BSWT ವರ್ಷದ ವ್ಯಕ್ತಿ-23″ ಪ್ರಶಸ್ತಿ ಪ್ರಧಾನ ಮತ್ತು 9ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯಿಂದ ಉದ್ಘಾಟನೆ


ಮಂಗಳೂರು: ಭಾರತ್ ಸೋಷಿಯಲ್ & ವೆಲ್ಫೇರ್ ಟ್ರಸ್ಟ್ (ರಿ) ಇದರ 2023 ನೇ ಸಾಲಿನ 9ನೇ ವರ್ಷದ ವಿದ್ಯಾರ್ಥಿ ವೇತನಾ ವಿತರಣಾ ಸಮಾರಂಭವು ದಿನಾಂಕ 30 – 12-23 ಶನಿವಾರ ಸಂಜೆ 3.00 ಘಂಟೆಗೆ ಸರಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಇಲ್ಲಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.

ನಾಡಗೀತೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವನ್ನು BSWT ಮಂಗಳೂರು ಇದರ ಅಧ್ಯಕ್ಷರಾದ ಎನ್ ಅಮೀನ್ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ಅರಿವಿದೆ ಸಮಾಜಕ್ಕೆ ಬೆಂಕಿ ಹಚ್ಚಲಾಗಿದೆ ಬದಲಾವಣೆ ಏನು ಎಲ್ಲಿಂದ ಆರಂಭವಾಗಬೇಕು ಎಂದರೆ ಅದು ವಿದ್ಯಾರ್ಥಿ ಜೀವನದಿಂದ ಒಳ್ಳೆಯವರೊಂದಿಗಿದ್ದರೆ ನಾವು ಒಳ್ಳೆಯವರಾಗುತ್ತೇವೆ ಸಹವಾಸ ದೋಷದಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತದೆ. ಮಾನವೀಯತೆ ಎಂಬುದು ಅದು ನಮ್ಮ ಆಯ್ಕೆಯಲ್ಲ ಕರ್ತವ್ಯ ಅದನ್ನು ನಾವು ನಿಭಾಯಿಸುತ್ತಿದ್ದೇವೆ. ಕಳೆದ ಒಂಬತ್ತು ವರ್ಷದ ಅವಧಿಯಲ್ಲಿ ವಿಭಿನ್ನ ರೀತಿಯಲ್ಲಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ” ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯರಾಜ್ ಅಮೀನ್ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ “ಶಿಕ್ಷಣ ರವಾನೆಯಾಗುತ್ತಿರಬೇಕು ಅದು ಕೇವಲ ತರಗತಿ ಕೋಣೆಯಲ್ಲಿ ಮಾತ್ರ ಸೀಮಿತವಾದ ಒಂದು ಪ್ರಕ್ರಿಯೆ ಅಲ್ಲ ಅದು ಚಿಂತನೆ, ಆರೋಗ್ಯ, ಕೌಶಲ್ಯ ಹಾಗು ಮೌಲ್ಯಗಳ ಮೂಲಕ ಬೆಳೆಯುತ್ತಿರಬೇಕು. ಸಮಾಜದ ಬಗ್ಗೆ ಕಾಳಜಿ ಉಂಟಾಗಬೇಕು ನಾನು ನನ್ನದು ಎಂಬ ಸ್ವಾರ್ಥ ಭಾವನೆ ಇರುವಾಗ ಸಮಸ್ಯೆ ನಿರ್ಮಾಣವಾಗುತ್ತದೆ ನಾವು ಆರೋಗ್ಯ ಪೂರ್ಣ ಸಮಾಜದ ಒಳಿತಿಗೆ ಪೂರಕವಾಗಿ ಬೆಳೆಯಬೇಕು ಆಗ ವಿದ್ಯೆಗೆ ಸರಿಯಾದ ಅರ್ಥ ಲಭಿಸುತ್ತದೆ. ಬಿಎಸ್‌ಡಬ್ಲ್ಯೂಟಿ ಬಳಗದವರೊಂದಿಗೆ ಸಣ್ಣ ಅವಧಿಯ ಭೇಟಿಯ ಮೂಲಕ ಅವರಿಗಿರುವ ಸಾಮಾಜಿಕ ಕಾಳಜಿಯನ್ನು ಅರಿತು ಬಹಳ ಸಂತೋಷವಾಯಿತು. ಯಾವುದೇ ಪ್ರಚಾರ ಬಯಸದ ಇವರ ಸೇವೆ ನಿಜಕ್ಕೂ ಶ್ಲಾಘನೀಯ” ಎಂದು ಉದ್ಘಾಟನಾ ನುಡಿಗಳನ್ನಾಡಿದರು.

ನಂತರ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಖ್ಯಾತ ಪತ್ರಕರ್ತೆ ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು (ವಿಜಯ ಟೈಮ್ಸ್ ಡಿಜಿಟಲ್ ಮೀಡಿಯಾ) ಅವರಿಗೆ ‘ಭಾರತ್ ಸೋಷಿಯಲ್& ವೆಲ್ಪೇರ್ ಟ್ರಸ್ಟ್ ಇದರ ‘ವರ್ಷದ ವ್ಯಕ್ತಿ-23″ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು “ಕೃತಘ್ನ ಸಮಾಜಕ್ಕೆ ಎಷ್ಟು ಕೊಟ್ಟರೂ ಅಷ್ಟೇ ಪತ್ರಿಕೋದ್ಯಮ ಜೀವನ ಸಾಕು ಎನಿಸುವಾಗಲೇ ಇಂತಹ ಸಜ್ಜನರು ನೀಡುವ ಪ್ರಶಸ್ತಿಗಳು ನಮ್ಮಲ್ಲಿ ಸ್ಪೂರ್ತಿ ತುಂಬುತ್ತದೆ ಸಮಾಜಕ್ಕಾಗಿ ಇನ್ನು ಕೂಡಾ ಸೇವೆ ಮಾಡಬೇಕು, ಸುಮ್ಮನೆ ಇರಬಾರದು ಹೋರಾಟ ಮಾಡಬೇಕು ನಮ್ಮ ಜೊತೆಗೆ ನೀವೆಲ್ಲ ಇದ್ದೀರಿ ಎಂಬ ಧೈರ್ಯ ಬರುತ್ತದೆ. ಪತ್ರಿಕೋದ್ಯಮ ಎಂದರೆ ಅದೊಂದು ಸಾಹಸದ ಕಾರ್ಯ ಕೇವಲ ಮೈಕೆ ಹಿಡಿದು ಅಭಿಪ್ರಾಯ ಕೇಳುವುದು, ವರದಿ ಮಾಡುವುದು ಮಾತ್ರವಲ್ಲ ಮಾಧ್ಯಮದ ಶಕ್ತಿ ಅತ್ಯಂತ ಭಯಾನಕವಾಗಿರುವಂತದ್ದು. ನಿಮ್ಮ ಮೊಬೈಲ್ ನಲ್ಲಿರುವ ಸಾಮಾಜಿಕ ಜಾಲತಾಣಗಳ ಮೂಲಕ ಅದರ ಅರಿವಾಗಿರಬಹುದು. ಪ್ರತಿಯೊಂದು ವಿಷಯವನ್ನು ಸರಿಯಾಗಿ ತಿಳಿದುಕೊಳ್ಳದೆ ನೀವು ಎಲ್ಲವನ್ನು ನಂಬಿಕೊಳ್ಳುತ್ತೀರಿ. ಸಮಾಜವನ್ನು ಎಚ್ಚರಿಸುವುದು ಮಾಧ್ಯಮದವರ ಮುಖ್ಯ ಕೆಲಸ ಅದಕ್ಕಾಗಿ ಅವರಿಗೆ ವಿಶೇಷ ಗೌರವ ಅವರು ತುಂಬಾ ಓದಿರುತ್ತಾರೆ, ಒಳ್ಳೆಯ ಜ್ಞಾನ ಅವರಿಗಿರುತ್ತದೆ ಎನ್ನುವುದರಿಂದ ಸಮಾಜ ಅವರ ಮೇಲೆ ಭರವಸೆ ಬಿಟ್ಟಿದೆ. ಆದ್ದರಿಂದ ಅದು ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಕರೆಯಲಾಗುತ್ತದೆ. ಆದರೆ ಇಂದು ಪ್ರಜಾಪ್ರಭುತ್ವದ ಪೋಪಿಕಾಲ ಮಾಧ್ಯಮದವರು ಆಳುವ ವರ್ಗದ ತುತ್ತೂರಿಗಳಾಗುತ್ತಿದ್ದಾರೆ. ನಮಗೇಕೆ ಎಂಬ ಧೋರಣೆ ನಮ್ಮದಾಗಿದೆ ನಾವು ಸತ್ತ ಪ್ರಜೆಗಳಾಗಿದ್ದೇವೆ ಪ್ರತಿಭಟಿಸುವ, ಪ್ರಶ್ನಿಸುವ ಪ್ರಜ್ಞೆಯನ್ನು ಇಂದು ಹಿರಿಯರಾಗಲಿ, ಶಿಕ್ಷಕರಾಗಲಿ ಇಂದಿನ ಮಕ್ಕಳಲ್ಲಿ ಬೆಳೆಸುವುದಿಲ್ಲ. ನಾವು ಪ್ರಶ್ನಿಸುವವರಾಗಬೇಕು ಯಾವುದೇ ಸರಕಾರವಾಗಲಿ, ಯಾವುದೇ ಜನ ಪ್ರತಿನಿಧಿಯಾಗಲಿ ಸ್ವಂತ ಹಣದಿಂದ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಸ್ಮಾರ್ಟ್ ಸಿಟಿ ಇರಬಹುದು, ಗ್ಯಾರಂಟಿ ಇರಬಹುದು ರಸ್ತೆ ನಿರ್ಮಾಣ ಇನ್ಯಾವುದೇ ಕಾರ್ಯಕ್ರಮ ಇರಬಹುದು ಎಲ್ಲಾ ಅಭಿವೃದ್ಧಿ ಕಾರ್ಯಗಳು ನಮ್ಮ ಟ್ಯಾಕ್ಸ್ ಹಣದಿಂದಲೇ ಅದು ದುರುಪಯೋಗವಾಗದಂತೆ ನೋಡುವುದು ನಮ್ಮ ಜವಾಬ್ದಾರಿ ಆದ್ದರಿಂದ ಸರಕಾರದ ಯಾವ ಕೆಲಸವೂ ಸರಿಯಾಗದಿದ್ದರೆ ಅದನ್ನು ನಾವು ಪ್ರಶ್ನಿಸುವವರಾಗಬೇಕು ಮೌನಿಗಳಾಗಬಾರದು. ನಾನು ಸಮಾಜವನ್ನು ಪ್ರೀತಿಸುತ್ತೇನೆ ನನ್ನ ಕೊನೆಯ ವರೇಗೂ ಸಮಾಜಕ್ಕಾಗಿ ದುಡಿಯುತ್ತೇನೆ, ಶಿಕ್ಷಣ, ಮಾದ್ಯಮ ಕ್ಷೇತ್ರ, ಸಾಮಾಜಿಕ ನ್ಯಾಯ ಇತ್ಯಾದಿಗಳ ಕುರಿತು ಮನಮುಟ್ಟುವಂತೆ ಮಾತನಾಡಿದರು. ನಂತರ ಗಣ್ಯ ಅತಿಥಿಗಳಾದ ಮಿಲಾಗ್ರಿಸ್ ಪಿ.ಯು ಕಾಲೇಜು ಪ್ರಾಂಶುಪಾಲರಾದ ಮೆಲ್ವಿನ್ ವಾಸ್, ಗೋಕರ್ಣನಾಥ ಫರ್ಸ್ಟ್ ಗ್ರೇಡ್ ಕಾಲೇಜು ಇದರ ಪ್ರಾಂಶುಪಾಲೆಯರಾದ ಡಾ ಆಶಾ ಲತ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಸುಪರಿಡೆಂಟ್ ಹರೀಶ್ ಕುಮಾರ್ ಕುತ್ತಡ್ಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸಮಾರೋಪ ನುಡಿಗಳನ್ನಾಡಿದರು. “ಪ್ರಜಾಪ್ರಭುತ್ವ ನಮ್ಮ ಉಸಿರು ದೇಶದ ಸಾಮರಸ್ಯ ಕಾಪಾಡುವುದು ನಮ್ಮ ಜವಾಬ್ದಾರಿ ಶಿಕ್ಷಣ ವ್ಯಾಪಾರೀಕಣಗೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ಕಡಿಮೆ ಉದ್ಯೋಗ ಸೃಷ್ಟಿಯಾಗುತ್ತಿದೆ ಆದ್ದರಿಂದ ಮಕ್ಕಳು ಸಾಮಾಜಿಕ ಜಾಲತಾಣ ಮೊಬೈಲ್, ಇಂಟರ್‌ನೆಟ್ ನ ಮೊರೆ ಹೋಗದೆ ಹೆಚ್ಚು ಕ್ರಿಯಾಶೀಲರಾಗಿ ಕಲಿಯಬೇಕು. ಶ್ರದ್ಧೆ ಮತ್ತು ಭಕ್ತಿಯಿಂದ ಕಲಿಯಬೇಕು. ನಾವು ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದೇವೆ ಅದು ಮುಂದುವರಿದರೆ ಬದುಕುವುದಕ್ಕೂ ಕಷ್ಟ ಆಗಬಹುದು. ಸರಿಯಾದ ಶಿಕ್ಷಣದಿಂದ ಮಾತ್ರ ಅದನ್ನು ಸರಿಪಡಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ನ್ನು ಅತಿಥಿಗಳಿಂದ ವಿತರಿಸಲಾಯಿತು ಒಟ್ಟು ನೂರಾಎಪ್ಪತೈದು ವಿದ್ಯಾರ್ಥಿಗಳಿಗೆ ವಿವಿಧ ಕೌಂಟರ್ ಮೂಲಕ ಚೆಕ್ ವಿತರಿಸಲಾಯಿತು. ಸಂಗೀತ ಶಿಕ್ಷಕಿ ಲಾವನ್ಯ ಸುದರ್ಶನ್ ರವರ ತಂಡದಿಂದ ಗುಂಪು ಗಾಯನ ನೆರವೇರಿತು, ಡಾ. ಅರುಣ್ ಉಳ್ಳಾಲ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿ ಧನ್ಯವಾದವಿತ್ತರು.

error: Content is protected !!