ಸುರತ್ಕಲ್ ನಲ್ಲಿ ಮಿ. ದಕ್ಷಿಣ ಕನ್ನಡ-2023 ದೇಹದಾರ್ಡ್ಯ ಸ್ಪರ್ಧೆ
ಸುರತ್ಕಲ್: ಝೆನ್ ಜಿಮ್ ಸುರತ್ಕಲ್ ಹಾಗೂ ದ.ಕ. ಅಶೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಮಿ. ದಕ್ಷಿಣ ಕನ್ನಡ 2023 ದೇಹದಾರ್ಡ್ಯ ಸ್ಪರ್ಧೆಯು ಶನಿವಾರ ಸಂಜೆ ಇಲ್ಲಿನ ಕರ್ನಾಟಕ ಸೇವಾ ವೃಂದ ಸಭಾಂಗಣದಲ್ಲಿ ಜರುಗಿತು.
ಉದ್ಘಾಟನೆ ನೆರವೇರಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು ಮಾತಾಡಿ, “ಬಾಡಿಬಿಲ್ಡರ್ ಗಳಿಗೆ ಕಮಿಟ್ ಮೆಂಟ್ ಅಗತ್ಯ. ತೆಗೆದುಕೊಳ್ಳುವ ಆಹಾರ, ಸಪ್ಲಿಮೆಂಟ್ ಗಳಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ದೇಹದಾರ್ಡ್ಯ ಅನ್ನುವುದು ಸುಲಭದ ಮಾತಲ್ಲ. ಇನ್ನು ಇಂತಹ ಸ್ಪರ್ಧೆ ಆಯೋಜನೆ ಮಾಡುವುದು ಕೂಡ ಕಷ್ಟ. ಯಾಕೆಂದರೆ ದೇಶದಲ್ಲಿ ಕ್ರಿಕೆಟ್ ನಂತಹ ಕ್ರೀಡೆಗಳಿಗೆ ಇರುವಷ್ಟು ಪ್ರೋತ್ಸಾಹ ಇಂತಹ ಕ್ರೀಡೆಗಳಿಗಿಲ್ಲ. ಹೀಗಿದ್ದರೂ ಪುಂಡಲೀಕ ಹೊಸಬೆಟ್ಟು ಮತ್ತವರ ತಂಡ ಸಾಕಷ್ಟು ಶ್ರಮವಹಿಸಿ ಸ್ಪರ್ಧೆಯನ್ನು ಆಯೋಜನೆ ಮಾಡಿದೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು. ಮುಂದೆಯೂ ಇಂತಹ ಸ್ಪರ್ಧೆ ನಿತ್ಯ ನಿರಂತರವಾಗಿ ನಡೆಯಲಿ” ಎಂದು ಶುಭ ಹಾರೈಸಿದರು.
ದ.ಕ. ದೇಹದಾರ್ಡ್ಯ ಸ್ಪರ್ಧಾ ಸಮಿತಿ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು ಮಾತನಾಡಿ, “ವಿಶೇಷ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪುಣ್ಯದ ಕೆಲಸ. ಇದು ಇನ್ನಷ್ಟು ಮಕ್ಕಳಿಗೆ ಪ್ರೇರಣೆಯನ್ನು ನೀಡಲಿದೆ. ಸ್ಪರ್ಧೆಯನ್ನು ಆಯೋಜಿಸಲು ಸಂಘಟನೆ ಹಾಗೂ ಝೆನ್ ಜಿಮ್ ನ ಸರ್ವ ಸದಸ್ಯರು ಶ್ರಮವಹಿಸಿ ದುಡಿದಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ. ಹೀಗಾಗಿ ನನ್ನೊಬ್ಬನಿಂದ ಇದು ಸಾಧ್ಯವಾಗಿಲ್ಲ. ಇದರ ಹಿಂದಿರುವ ಎಲ್ಲರಿಗೂ ಅಭಿನಂದನೆಗಳು” ಎಂದರು.
ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್ ಮಾತನಾಡಿ, “ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ನಡೆಯಲಿ. ಯುವಕರಲ್ಲಿ ಯುವ ಚೇತನವನ್ನು ಮೂಡಿಸಲಿ. ನಿರಂತರವಾಗಿ ಕ್ರೀಡಾ ಚಟುವಟಿಕೆಗಳು ಸುರತ್ಕಲ್ ಭಾಗದಲ್ಲಿ ನಡೆಯುತ್ತಿರಲಿ” ಎಂದು ಹೇಳಿದರು.
ಬಳಿಕ ಮಾತಾಡಿದ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು, “ನಾನು ಕಾಲೇಜಿಗೆ ಹೋಗುವ ಸಮಯದಲ್ಲಿ ಪುಂಡಲೀಕ ಹೊಸಬೆಟ್ಟು ಅವರು ಕುಸ್ತಿಪಟು ಹಾಗೂ ದೇಹದಾರ್ಡ್ಯ ಪಟು ಆಗಿದ್ದರು. ಇವರಿಂದ ಪ್ರೇರಣೆ ಪಡೆದ ನಾನು ಕುಸ್ತಿ ಹಾಗೂ ಇತರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮಂಗಳೂರು ವಿವಿಯನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆದಿದ್ದೆ. ಇವರಿಂದ ಇಂತಹ ಕ್ರೀಡಾ ಚಟುವಟಿಕೆಗಳು ನಡೆಯಲಿ. ಕ್ರೀಡಾಳುಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಆರ್ಥಿಕ ಸಹಕಾರ ನೀಡುತ್ತಾ ಬಂದಿದ್ದು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತೇನೆ” ಎಂದರು.
ಇದೇ ಸಂದರ್ಭದಲ್ಲಿ ವರದರಾಜ್ ಉಳ್ಳಾಲ, ಯಜ್ನೇಶ್ ಬರ್ಕೆ, ನಾರಾಯಣ ಶೆಣೈ ಅವರನ್ನು ಝೆನ್ ಜಿಮ್ ಸುರತ್ಕಲ್ ಹಾಗೂ ದ.ಕ. ಅಶೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ವತಿಯಿಂದ ಅತಿಥಿಗಳು ಸನ್ಮಾನಿಸಿದರು.
ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ಲಿಖಿತ ರಾಜ್ ಪುತ್ರನ್, ಹರೀಶ್ ವೆಂಕಟೇಶ್, ನಿಹಾಲ್ ವಿ. ಕರ್ಕೇರ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ, ನಾಡೋಜ ಡಾ.ಜಿ.ಶಂಕರ್, ದ.ಕ. ಮೊಗವೀರ ಮಹಾಜನ ಸಭಾ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಐ. ರಮಾನಂದ ಭಟ್, ಪಣಂಬೂರು ಕಾಂತೇರಿ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಟಿ. ರೈ, ನಾರಾಯಣ ಶೆಣೈ, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ನೇಶ್ ಬರ್ಕೆ, ದ.ಕ. ದೇಹದಾರ್ಡ್ಯ ಸ್ಪರ್ಧಾ ಸಮಿತಿ ಅಧ್ಯಕ್ಷ ರಾಷ್ಟೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು, ಜಯಪ್ರಕಾಶ್ ಇಡ್ಯಾ, ಉದ್ಯಮಿ ಸತೀಶ್ ಮುಂಚೂರು, ಮುರಳಿ ಹೆಚ್., ಮಾರುತಿ ಸೇವಾ ಸಂಘ ಉಳ್ಳಾಲ ಇದರ ಅಧ್ಯಕ್ಷ ವರದರಾಜ್ ಉಳ್ಳಾಲ, ಎಂ.ಜಿ. ರಾಮಚಂದ್ರ ರಾವ್ ಮುಕ್ಕ, ಸಂಸ್ಥೆಯ ಗೌರವಾಧ್ಯಕ್ಷ ಪ್ರೇಮನಾಥ್ ಉಳ್ಳಾಲ, ಭಾಸ್ಕರ್ ತೊಕ್ಕೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ದ.ಕ. ದೇಹದಾರ್ಡ್ಯ ಸ್ಪರ್ಧಾ ಸಮಿತಿ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು ಪ್ರಾಸ್ತಾವಿಕ ಮಾತನ್ನಾಡಿದರು.
ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.