ಮಂಗಳೂರು: ಭೂಮಿ ಮೇಲಿನ ವ್ಯಾಮೋಹವೋ ಅಥವಾ ಕಿರುಕುಳ ನೀಡಿ ಖುಷಿ ಪಡಬೇಕು ಅನ್ನೋ ಮನೋಭಾವವೋ ಗೊತ್ತಿಲ್ಲ. ಆದ್ರೆ ಆ ಒಬ್ಬ ವ್ಯಕ್ತಿಯಿಂದ ಇಡೀ ಊರಿನ ಜನರ ನೆಮ್ಮದಿ ಮಾತ್ರ ಹಾಳಾಗಿದೆ. ಸರ್ಕಾರಿ ಅಧಿಕಾರಿಗಳೂ ಸುಸ್ತಾಗಿ ಹೋಗಿದ್ದಾರೆ. ಕೇವಲ ಒಂದುವರೆ ಫೀಟ್ ಕಾಲು ದಾರಿಗಾಗಿ ಇಪ್ಪತ್ತು ಬಾರಿ ತನ್ನ ಜಮೀನು ಸರ್ವೆ ಮಾಡಿಸಿ ಸರ್ವೆ ಅಧಿಕಾರಿಗಳು ನೀಡಿದ ವರದಿಗೂ ತೃಪ್ತಿಯಾಗಿಲ್ಲ.
ಉಳ್ಳಾಲ ತಾಲೂಕಿನ ಅಂಬ್ಲ ಮೊಗರು ಗ್ರಾಮದ ಪಾಡ್ಯರಮನೆ ಎಂಬಲ್ಲಿ ನಾಗೇಶ ಶೇಣವ ಎಂಬವರ ಐದು ಸೆಂಟ್ ಜಾಗವನ್ನ ಬೇರೆ ಬೇರೆ ಸರ್ವೆಯರ್ ಗಳು ಈಗಾಗಲೆ ಇಪ್ಪತ್ತುಬಾರಿ ಸರ್ವೆ ನಡೆಸಿ ವರದಿ ಕೊಟ್ಟಿದ್ದಾರೆ. ಆದ್ರೆ ಸರ್ವೆಗಾಗಿ ಅರ್ಜಿ ಸಲ್ಲಿಸೋ ಅವರಿಗೆ ಮಾತ್ರ ಯಾರೇ ಸರ್ವೆ ಮಾಡಿದ್ರೂ ಅದು ತನ್ನ ಪರವಾಗಿ ಬಂದಿಲ್ಲ ಅನ್ನೋ ಕಾರಣಕ್ಕೆ ಮತ್ತೆ ಮತ್ತೆ ಸರ್ವೆ ಮಾಡಿಸ್ತಾನೆ ಇದ್ದಾರೆ ಅನ್ನೋದು ನಾಗರಿಕರ ದೂರು. ಸರ್ವೆ ಮಾಡಿಸೋ ಹುಚ್ಚಿಗೆ ಕಾರಣವಾಗಿರೋದು ಕೇವಲ ಒಂದುವರೆ ಅಡಿ ಅಗಲದ ಕಾಲು ದಾರಿ ಅನ್ನೋದೇ ವಿಪರ್ಯಾಸ. ಹೌದು ಮನೆಗೆ ಹೊಂದಿಕೊಂಡಂತೆ ಹಲವು ಮನೆಗಳಿದ್ದು, ಅವರು ಸಂಚರಿಸೋ ಕಾಲುದಾರಿ ಇವರ ಐದು ಸೆಂಟ್ಸ್ ಜಾಗದ ಪಕ್ಕದಲ್ಲೇ ಅನಾದಿ ಕಾಲದಿಂದಲೂ ಹಾದು ಹೋಗುತ್ತದೆ.
ಈ ರಸ್ತೆಯನ್ನು ಬಂದ್ ಮಾಡಬೇಕು ಅಕ್ಕ ಪಕ್ಕದವರಿಗೆ ಕಿರುಕುಳ ಕೊಡಬೇಕು ಅನ್ನೋ ಒಂದೇ ಉದ್ದೇಶದಿಂದ ನಿರಂತರವಾಗಿ ಕಿರುಕುಳ ನೀಡುತ್ತಾ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಾಗ ಸರ್ವೆ ಮಾಡಿಸಿದ್ರೂ ತೃಪ್ತಿಯಾಗದೆ ಮತ್ತೆ ಮತ್ತೆ ಸರ್ವೆ ಮಾಡಿಸ್ತಾನೇ ಇದ್ದಾರೆ.
ಸದ್ಯ ವಾಸವಾಗಿರೋ ಮನೆಯ ಅಡಿ ಸ್ಥಳ ಗೇಣಿಯ ಹಕ್ಕಿನಿಂದ ಬಂದಿದ್ದೇ ಹೊರತು ಖರೀದಿ ಮಾಡಿದ ಜಮೀನು ಕೂಡ ಅಲ್ಲ. ಇದೇ ರೀತಿಯಾಗಿ ಇಲ್ಲಿ ಹಲವಾರು ಜನರು ಚಾಲ ಗೇಣಿಯ ಹಕ್ಕಿನಿಂದಲೇ ಜಮೀನು ಪಡೆದು ಮನೆ ಕಟ್ಟಿಕೊಂಡವರೇ ಜಾಸ್ತಿ. ಆ ಕಾಲದಲ್ಲಿ ಕಾಲುದಾರಿಯ ಬಗ್ಗೆ ಯಾರೂ ತಲೆಕೆಡಿಕೊಳ್ಳದ ಕಾರಣ ಸರ್ಕಾರಿ ದಾಖಲೆಯಲ್ಲೂ ಕಾಲುದಾರಿಯ ಉಲ್ಲೇಖ ಇಲ್ಲ . ಹಾಗಂತ ಹಲವಾರು ವರ್ಷದಿಂದ ಬಳಸ್ತಾ ಇದ್ದ ಕಾಲುದಾರಿಗೆ ಸರ್ವೆ ಇಲಾಖೆಯ ಸರ್ವೆಯರ್ ಗಳನ್ನು ಬುಟ್ಟಿಗೆ ಹಾಕಿ ಅಕ್ಕಪಕ್ಕದ ಮನೆಯವರಿಗೆ ನೋಟಿಸ್ ನೀಡದೆ ಸರ್ವೆ ದಾಖಲೆಯಲ್ಲಿ ಪ್ಲಾಟಿಂಗ್ ಮಾಡಿ ಈಗ ಗಡಿ ಗುರುತಿಗೆ ಅರ್ಜಿ ಹಾಕಿಸಿ ಸಾರ್ವಜನಿಕ ದಾರಿಯನ್ನು ಮುಚ್ಚಲು ಹೊರಟು ಸರ್ವೆ ಇಲಾಖೆಯ ಉನ್ನತ ಅಧಿಕಾರಿಗಳನ್ನು ಯಾಮಾರಿಸುತ್ತಿದ್ದಾರೆ. ಕಾಲುದಾರಿ ಹಾದು ಹೋಗುವ ಪಕ್ಕದಲ್ಲಿ ನಿರ್ಮಾಣವಾದ ಮನೆಯೇ ಇವರಿಗೆ ಸಮಸ್ಯೆ ಅನ್ನೋದು ಗ್ರಾಮದ ಎಲ್ಲರಿಗೂ ಗೊತ್ತಿರೋ ವಿಚಾರ. ಪಕ್ಕದ ಜಾಗದ ಆನಂದ ಪೂಜಾರಿ ಎಂಬವರು ತಮ್ಮ ಹಳೇ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡಿದ ಬಳಿಕ ಮನೆಗೆ ಇರೋ ದಾರಿಯನ್ನು ಬಂದ್ ಮಾಡಬೇಕು ಅದಕ್ಕಾಗಿ ಅದರಾಚೆಗೆ ಇರೋ ಹತ್ತು ಮನೆಗೆ ತೊಂದರೆ ಆದ್ರೂ ಅಡ್ಡಿ ಇಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಇಡೀ ಗ್ರಾಮದ ಜನರಿಗೆ ತೊಂದರೆ ಮಾಡುವ ಈ ಸರ್ವೆ ಮಾಡಿಸೋ ಹುಚ್ಚಿಗೆ ಊರ ಹಿರಿಯರು ಬುದ್ಧಿ ಹೇಳಬೇಕು ಅನ್ನುತ್ತಾರೆ ಸ್ಥಳೀಯರು.