ಸುರತ್ಕಲ್: ಕೈಗಾರಿಕೆ ಸ್ಥಾಪನೆ ಸಂದರ್ಭದಲ್ಲಿ ಭೂಮಿ ಕಳೆದುಕೊಂಡಿದ್ದ 293 ಮಂದಿ ನಿರ್ವಸಿತರಿಗೆ ಓಎಂಪಿಎಲ್ ಕಂಪೆನಿ ಕೆಪಿಟಿಯಲ್ಲಿ ತರಬೇತಿ ಕೊಟ್ಟು ಕೆಲಸಕ್ಕೆ ನೇಮಿಸಿಕೊಂಡಿತ್ತು. ಆದರೆ ಈಗ ಕಂಪೆನಿಯು ಎಂಆರ್ ಪಿಎಲ್ ಜೊತೆಗೆ ವಿಲೀನಗೊಂಡಿದ್ದರೂ ತಮಗೆ ವೇತನ ಪಾವತಿಯಲ್ಲಿ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ಎಂಆರ್ ಪಿ ಎಲ್ ಏರೊಮ್ಯಾಟಿಕ್ಸ್ ಕಾಂಪ್ಲೆಕ್ಸ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಸುಧೀರ್ ಕುಮಾರ್ ನೇತೃತ್ವದಲ್ಲಿ ಎರಡು ದಿನಗಳ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾನ ಬಳಿ ಪ್ರತಿಭಟನೆ ನಡೆಸುತ್ತಿರುವ ಕಂಪೆನಿಯ ಕಾರ್ಮಿಕರು ತಮಗೆ ಉದ್ಯೋಗ ಭದ್ರತೆ ಜೊತೆಗೆ ವೇತನ ಪಾವತಿಯಲ್ಲಿ ತಾರತಮ್ಯ ಮಾಡದೇ ಏಕರೂಪ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತಾಡಿದ ಸುಧೀರ್ ಕುಮಾರ್ ಅವರು, “ಓಎಂಪಿಎಲ್ ಅನ್ನು ಎಂಆರ್ ಪಿಎಲ್ ಜೊತೆಗೆ ವಿಲೀನ ಮಾಡಲಾಗಿದೆ. ನಮಗೆ 2022ರ ಡಿಸೆಂಬರ್ ತಿಂಗಳಲ್ಲಿ ಏಕರೂಪ ಸಂಬಳ ನೀಡಬೇಕೆಂದು ಎಂಆರ್ ಪಿಎಲ್ ಬೋರ್ಡ್ ಸ್ವತಂತ್ರ ನಿರ್ದೇಶಕರು ಆದೇಶವನ್ನು ಹೊರಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ತಾರತಮ್ಯ ಧೋರಣೆ ಮುಂದುವರಿದಿದೆ. ಮೇಲಿನ ಅಧಿಕಾರಿಗಳು ಕೊಟ್ಟರೂ ಕೆಳಗಡೆ ಇರುವ ಹೆಚ್ ಆರ್ ವಿಭಾಗದ ಅಧಿಕಾರಿಗಳು ಕೊಡುತ್ತಿಲ್ಲ. ಆದಷ್ಟು ಬೇಗನೆ ಬಾಕಿ ವೇತನ ಪಾವತಿ ಮಾಡುವ ಜೊತೆಗೆ ಏಕರೂಪ ವೇತನ ಜಾರಿಯಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಂಪೆನಿ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಎಂಆರ್ ಪಿಎಲ್ ಅಧಿಕಾರಿಗಳ ವಿರುದ್ಧ ಇದು ಮೂರನೇ ಬಾರಿ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದು ಈ ಹಿಂದೆಯೂ ನೀಡಿದ್ದ ಬೇಡಿಕೆಗಳನ್ನು ಈಡೇರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಭೂ ನಿರ್ವಸಿತರಿಗೆ ಉದ್ಯೋಗ ಸಿಕ್ಕಿತು ಎಂದಾಗ ವೇತನ ಸಮಸ್ಯೆ ಎದುರಾಗಿದ್ದು ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕ್ರಮ ಜರುಗಿಸಬೇಕಾದ ಅಗತ್ಯವಿದೆ.