ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಸಂಘಟನೆಯ ಪದಗ್ರಹಣ ಸಮಾರಂಭ
ಸುರತ್ಕಲ್: ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಸಂಘಟನೆಯ ಪದಗ್ರಹಣ ಸಮಾರಂಭ ಹಾಗೂ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮವು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ನಲ್ಲಿ ಜರುಗಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನೂತನ ಸಂಘಟನೆಯ ಪದಗ್ರಹಣ ನೆರವೇರಿಸಿ ಮಾತಾಡಿದ ಇಂಜಿನಿಯರ್ ರಾಜೇಂದ್ರ ಕಲ್ಬಾವಿ ಅವರು, “ಮೂಲ್ಕಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಸ್ಥಾಪನೆಗೊಂಡಿರುವುದು ಸಂತಸದ ವಿಚಾರ. ನಾವು ಮಂಗಳೂರಿನಲ್ಲಿ ಸಂಘಟನೆಯ ಅಡಿಯಲ್ಲಿ ಒಗ್ಗಟ್ಟಾಗಿ ದುಡಿದು ಯಶಸ್ಸು ಕಂಡಿದ್ದೇವೆ. ಅದೇ ರೀತಿ ಈ ಭಾಗದಲ್ಲಿ ಪ್ರಾರಂಭವಾಗಿರುವ ಸಂಘಟನೆ ಸಾಮಾಜಿಕವಾಗಿ ಆರ್ಥಿಕವಾಗಿ ಸಶಕ್ತವಾಗಿ ದೇಶದಲ್ಲಿ ಒಳ್ಳೆಯ ಹೆಸರನ್ನು ಪಡೆಯಲಿ. ನವ ಮೂಲ್ಕಿಯ ನಿರ್ಮಾಣದಲ್ಲಿ ತೊಡಗಿಕೊಂಡು ಯಶಸ್ಸಿನ ಪಥದತ್ತ ಸಾಗಲಿ” ಎಂದರು.
ಬಳಿಕ ಮಾತಾಡಿದ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಇದರ ಅಧ್ಯಕ್ಷ ಜೀವನ್ ಕೆ. ಶೆಟ್ಟಿ ಅವರು, “ನಿಟ್ಟೆ ಕಾಲೇಜಿನಲ್ಲಿ ನನ್ನನ್ನು ತಿದ್ದಿ ತೀಡಿ ಬೆಳೆಸಿದ್ದು ಪ್ರೊಫೆಸರ್ ಜಿ.ಆರ್. ರೈ ಅವರು. ಅವರ ನೆರಳಿನಲ್ಲಿ ನಾನು ಸಿವಿಲ್ ಇಂಜಿನಿಯರ್ ಆಗಿರುವುದು ಹೆಮ್ಮೆಯ ವಿಷಯ. ಮೂಲ್ಕಿ ತಾಲೂಕು ಘೋಷಣೆಯಾದ ಬಳಿಕ ತಾಲೂಕಿನ ಅನೇಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಚಿವಾಲಯ, ಅಧಿಕಾರಿಗಳಿಗೆ ಪತ್ರ ಬರೆದು ಪ್ರಶ್ನಿಸಿದ್ದೇನೆ. ಇದರಲ್ಲಿ ಕೆಲವೊಂದು ಸಮಸ್ಯೆಗಳು ಪರಿಹಾರವಾಗಿವೆ ಮತ್ತು ಕೆಲವು ಹಾಗೇ ಉಳಿದಿವೆ. ಒಬ್ಬ ಜೀವನ್ ಶೆಟ್ಟಿಯಿಂದ ಇದು ಆಗಲ್ಲ ಹೀಗಾಗಿ ಸಂಘಟನೆ ನಿರ್ಮಿಸಿ ಅದರ ಮೂಲಕ ಮುಂದಕ್ಕೂ ಸಾಮಾಜಿಕ ಚಟುವಟಿಕೆಗಳು ನಡೆಯಬೇಕು ಎಂಬ ಉದ್ದೇಶದಿಂದ ಸಂಘಟನೆ ಸ್ಥಾಪಿಸಲಾಗಿದೆ. ಬೀಚ್ ಟೂರಿಸಂ, ಟೆಂಪಲ್ ಟೂರಿಸಂ ಅಭಿವೃದ್ಧಿಯಾಗಬೇಕು ಮೂಲ್ಕಿಯ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಿ ಹೊರಜಗತ್ತಿಗೆ ತಿಳಿಯಬೇಕು. ಮೂಲ್ಕಿಯಲ್ಲಿ ಅನೇಕ ಡೇಂಜರ್ ಝೋನ್ ಗಳಿದ್ದು ಇವುಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಗಳು ಮುಂದಾಗಬೇಕು” ಎಂದರು.
ಮಾತು ಮುಂದುವರಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಇಂಜಿನಿಯರ್ಸ್ ಸಂಘಟನೆ ಹೆಚ್ಚೆಚ್ಚು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜಪರ ಕಾಳಜಿಯನ್ನು ಬೆಳೆಸಿಕೊಳ್ಳಲಿ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೀವನ್ ಶೆಟ್ಟಿ ಅವರಿಗೆ ಸಂಘಟನೆಯ ಹಿರಿಯರು ಮತ್ತು ಸದಸ್ಯರು ಶಕ್ತಿ ತುಂಬುವ ಮೂಲಕ ಮೂಲ್ಕಿ ಭಾಗದಲ್ಲಿ ಯಶಸ್ವಿ ಸಂಘಟನೆಯಾಗಿ ಬೆಳೆಯಲಿ” ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಇಂಜಿನಿಯರ್ ಪ್ರೊಫೆಸರ್ ಜಿ.ಆರ್. ರೈ, ಇಂಜಿನಿಯರ್ ವಿಜಯ ವಿಷ್ಣು ಮಯ್ಯ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ರಾಜೇಂದ್ರ ಕಲ್ಬಾವಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಂಘಟನೆಯ ಅಧ್ಯಕ್ಷ ಜೀವನ್ ಕೆ. ಶೆಟ್ಟಿ, ಕ್ರೆಡೈ ಉಡುಪಿ ಅಧ್ಯಕ್ಷ ಮನೋಹರ್ ಶೆಟ್ಟಿ, ಕೆ. ರೆನಾಲ್ಡ್, ವಿನೋದ್ ಎ.ಆರ್. ಪಿಂಟೋ, ಪಾಂಡುರಂಗ ಆಚಾರ್ಯ, ಶಿವಪುತ್ರಪ್ಪ, ಉಜ್ವಲ್ ಡಿಸೋಜ, ಮಹಾಬಲ ಎಂ., ಬಾಲಸುಬ್ರಮಣ್ಯ ಎಂ. ಮತ್ತಿತರರು ಉಪಸ್ಥಿತರಿದ್ದರು.
ಸುಜಿತ್ ಸಾಲಿಯಾನ್ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.