ಮಂಗಳೂರು: “ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹಂತಕ ಎಂಬರ್ಥದಲ್ಲಿ ಬಿಂಬಿಸಿ ಭಾಷಣ ಮಾಡಿದ್ದಾರೆ. ಪೂಂಜಾ ಈ ಹಿಂದೆ ಮಹಿಳೆಯೊಬ್ಬರ ಮೇಲೆ ಮೊಟ್ಟೆ ಎಸೆದಿದ್ದ ಪ್ರಕರಣದಲ್ಲಿ ಭಾಗಿಯಾದವರು. ಅವರ ಬಗ್ಗೆ ಜಿಲ್ಲೆಯ ಜನರಿಗೆ ಚೆನ್ನಾಗಿ ತಿಳಿದಿದೆ. ಸುರತ್ಕಲ್ ನಲ್ಲಿ ಗ್ಯಾಸ್ ಏಜೇನ್ಸಿ ನಡೆಸುತ್ತಿದ್ದ ಪೂಂಜಾ ತಮಗೆ ಎಂಎಲ್ ಎ ಟಿಕೆಟ್ ಸಿಕ್ಕ ಬಳಿಕ ಅದನ್ನು ಮುಸ್ಲಿಂ ವ್ಯಕ್ತಿಗೆ ಮಾರಿದ್ದಾರೆ. ಈಗ ಚುನಾವಣೆ ಗೆದ್ದು ಮುಸ್ಲಿಮರ ಮತಗಳೇ ಬೇಡ ಎನ್ನುವ ಪೂಂಜಾ ಈಗಲೂ ಹಿಂಬಾಗಿಲ ಮೂಲಕ ಮುಸ್ಲಿಮರ ಮನೆಗೆ ಹೋಗಿ ನೆಯಿ ಚೋರ್ ತಿನ್ನುತ್ತಾರೆ. ಪೂಂಜಾ ಇದೇ ರೀತಿ ಮಾತಾಡುವುದನ್ನು ಮುಂದುವರಿಸಿದರೆ ನಮ್ಮಲ್ಲಿಯೂ ಮೊಟ್ಟೆಗಳು ಸಾಕಷ್ಟು ಇವೆ” ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಕಿಡಿಕಾರಿದ್ದಾರೆ.
“ಕಳೆದ ಮೇ 22ರಂದು ಬೆಳ್ತಂಗಡಿ ತಾಲೂಕಿನ
ಗುಣವತಿ ಯಾನೆ ಕಿನ್ಯಮ್ಮ ಸಭಾಭವನದಲ್ಲಿ ಬಿ.ಜೆ.ಪಿ. ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಮಾಡಿದ್ದ ಸಾರ್ವಜನಿಕ ಭಾಷಣದಲ್ಲಿ “24 ಹಿಂದೂಗಳ ಕೊಲೆಯನ್ನು ಮಾಡಿದ ಸಿದ್ದರಾಮಯ್ಯ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಕೊಲೆ
ಆಪಾದನೆಯಂತಹ ಸುಳ್ಳು ಆರೋಪವನ್ನು ಮಾಡಿ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು ಅವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಐಜಿ ಅವರಿಗೆ ದೂರು ನೀಡಿದರು.
ಬಳಿಕ ಮಾಧ್ಯಮಗಳ ಮುಂದೆ ಮಾತಾಡಿದ ಅವರು,
“ಹರೀಶ್ ಪೂಂಜಾ ಅವರು ಸಾರ್ವಜನಿಕವಾಗಿ ದೊಂಬಿ ನಡೆಸುವ ಹಾಗೂ ಜಾತಿ ಜಾತಿಗಳ ಮಧ್ಯೆ ಮತ್ತು ಧರ್ಮ ಧರ್ಮಗಳ ಬಗ್ಗೆ ವರ್ಗ ಸಂಘರ್ಷಗಳನ್ನು ಉಂಟುಮಾಡಲು ನೇರವಾಗಿ ಪ್ರಯತ್ನಿಸಿರುತ್ತಾರೆ. ಸಾಮಾಜಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ
ಬಿ.ಜೆ.ಪಿ. ಕಾರ್ಯಕರ್ತರನ್ನು ಉದ್ವೇಗಗೊಳಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಸೊತ್ತುಗಳನ್ನು ನಾಶಗೊಳಿಸುವ
ಉದ್ದೇಶದಿಂದ ಈ ರೀತಿ ಕುಮ್ಮಕ್ಕು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ಒಂದು ಧರ್ಮದವರು ಇನ್ನೊಂದು ಧರ್ಮದವರ ಮೇಲೆ ದಂಗೆ ಏಳಲು
ಉದ್ದೇಶಪೂರ್ವಕವಾಗಿ ಪ್ರಯತ್ನಿಸಿರುತ್ತಾರೆ” ಎಂದು ಆರೋಪಿಸಿದರು.
“ದಕ್ಷಿಣ ಕನ್ನಡ ಜಿಲ್ಲೆಯು ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ಸಮಾಜದಲ್ಲಿ ಧರ್ಮ ಧರ್ಮಗಳ ಮಧ್ಯೆ ಸಂಘರ್ಷವನ್ನು ಉಂಟುಮಾಡಲು ಈ ರೀತಿ ಭಾಷಣ ಮಾಡಿರುತ್ತಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸದೆ ಹೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಾವೇ ಮುಂದಾಗಿ ತಕ್ಕ ಉತ್ತರ ನೀಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ರಾಘವೇಂದ್ರ ರಾವ್, ರಾಜೇಶ್ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.