ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕರ್ತರ ಒತ್ತಾಯ
ಮಂಗಳೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳಿಂದ ಹೊಸಮುಖಗಳನ್ನು ಕಣಕ್ಕಿಳಿಸುವ ಮೂಲಕ ವಿನೂತನ ಪ್ರಯೋಗಕ್ಕೆ ರಾಜ್ಯ ಮುಖಂಡರು ಮುಂದಾಗಿದ್ದಾರೆ. ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲೂ ಬಿಜೆಪಿ ಹೈಕಮಾಂಡ್ ಹೊಸಮುಖವನ್ನು ಕಣಕ್ಕಿಳಿಸಲು ಮುಂದಾಗಿದೆ ಎಂಬ ಮಾಹಿತಿ ಈ ಭಾಗದ ಕಾರ್ಯಕರ್ತರಲ್ಲಿ ಹರ್ಷಕ್ಕೆ ಕಾರಣವಾಗಿದೆ. ಹಾಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಕಳೆದ ಅವಧಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಆರೋಪದ ಮಧ್ಯೆ ಅರೆಸ್ಸೆಸ್ ನಿಂದ ರಾಜಕೀಯ ಪ್ರವೇಶಿಸಿರುವ ಸುನಿಲ್ ಆಳ್ವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಾಮಾನವನ್ನು ಗಮನಿಸುವಾಗ ಹೊಸಮುಖಗಳಿಗೆ ಆದ್ಯತೆ ನೀಡುವಂತೆ ಕಾರ್ಯಕರ್ತರ ಒತ್ತಡ ಹೆಚ್ಚುತ್ತಿದ್ದು ಈಗಾಗಲೇ ಕೆಲವು ಕಡೆಗಳಲ್ಲಿ ಹಾಲಿ ಶಾಸಕರಿಗೆ ಕೊಕ್ ಕೊಡುವ ಸ್ಪಷ್ಟ ಸೂಚನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ. ಹೀಗಿರುವಾಗ ಮೂಲ್ಕಿ ಮಂಡಲ ಬಿಜೆಪಿ ಅಧ್ಯಕ್ಷ ಸುನಿಲ್ ಆಳ್ವರಿಗೆ ಟಿಕೆಟ್ ಕೊಡುವಂತೆ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಆಳ್ವರ ಪರ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಬಾಲ್ಯದಿಂದಲೂ ಅರೆಸ್ಸೆಸ್ ಸ್ವಯಂಸೇವಕನಾಗಿ ಸಂಘದ ಮುಖ್ಯ ಶಿಕ್ಷಕನಾಗಿ ತನ್ನ ಕೆಲಸವನ್ನು ನಿರ್ವಹಿಸಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತನಾಗಿ, ಹಿಂದೂ ಜಾಗರಣ ವೇದಿಕೆ ಮೂಲ್ಕಿ ನಗರ ಸಂಚಾಲಕರಾಗಿ ಸಂಘಟನೆಯನ್ನು ಕಟ್ಟಿ ಬೆಳೆಸಿರುತ್ತಾರೆ. ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷರಾಗಿ ದಕ್ಷ ಸೇವೆಯನ್ನು ಸಲ್ಲಿಸಿ ಪ್ರಸ್ತುತ ಬಿಜೆಪಿ ಮೂಲ್ಕಿ ಮೂಡಬಿದ್ರೆ ಮಂಡಲದ ಅಧ್ಯಕ್ಷರಾಗಿ ಕಾರ್ಯಕರ್ತರ ಮನೆ ಮಾತಾಗಿದ್ದಾರೆ. ಕಾರ್ಯಕರ್ತರೇ ಬೆಳೆಸಿರುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸುನಿಲ್ ಆಳ್ವರಿಗೆ ಒಂದೊಮ್ಮೆ ಟಿಕೆಟ್ ನೀಡಿದಲ್ಲಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಒಗ್ಗಟ್ಟಾಗಿ ಕೆಲಸ ಮಾಡಲು ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಹಾಲಿ ಶಾಸಕ ಉಮನಾಥ್ ಕೋಟ್ಯಾನ್ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಧ್ಯೆ ಟಿಕೆಟ್ ಗಾಗಿ ಪೈಪೋಟಿ ಹೆಚ್ಚಿದೆ. ಈ ಬಾರಿ ಕೋಟ್ಯಾನ್ ಅವರನ್ನು ಬೇರೆ ಕ್ಷೇತ್ರದಿಂದ ಕಣಕ್ಕಿಳಿಸುವ ಸೂಚನೆ ಕೂಡಾ ಹೈಕಮಾಂಡ್ ಅಂಗಳದಿಂದ ಹೊರಬಿದ್ದಿದೆ. ಹೀಗಾಗಿ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವರಿಗೆ ಟಿಕೆಟ್ ಕೊಡುವಂತೆ ಕಾರ್ಯಕರ್ತರು ದುಂಬಾಲು ಬಿದ್ದಿದ್ದಾರೆ. ಪಕ್ಷದ ಯುವ, ನಿಷ್ಠಾವಂತ ಕಾರ್ಯಕರ್ತರ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಆಳ್ವರು ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ. ಇಂತವರಿಗೆ ಟಿಕೆಟ್ ಕೊಟ್ಟಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಇನ್ನಷ್ಟು ಬಲಗೊಳ್ಳಲಿದೆ ಅನ್ನೋದು ಪಕ್ಷದ ಹಿರಿಯ ಕಾರ್ಯಕರ್ತರ ಮಾತುಗಳು.