ಸುರತ್ಕಲ್: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಸಲ್ಪಡುವ ಬೃಹತ್ ವಸತಿ ಸಮುಚ್ಛಯದ ಶಿಲಾನ್ಯಾಸ ಕಾರ್ಯಕ್ರಮ ಚೇಳಾಯರು ಪಂಚಾಯತ್ ವಠಾರದಲ್ಲಿ ಜರುಗಿತು. ಭೂಮಿಪೂಜೆ ನೆರವೇರಿಸಿ ಮಾತಾಡಿದ ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಅವರು, “”12 ವರ್ಷಗಳ ಹಿಂದೆ ಮುಡಾ ವತಿಯಿಂದ 75 ಎಕರೆ ಭೂಮಿ ಪಡೆಯಲಾಗಿತ್ತು. ಈವರೆಗೆ ಅಲ್ಲಿ ಹೆಚ್ಚಿನ ಕೆಲಸ ಮಾಡಲಾಗಲಿಲ್ಲ. ಈಗ ಕಾಲ ಕೂಡಿಬಂದಿದ್ದು 45 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಕೈ ಹಾಕಲಾಗಿದೆ. ಮೂಡಬಿದ್ರೆ ಶಾಸಕರು ಇದಕ್ಕಾಗಿ ಸಾಕಷ್ಟು ಮುತುವರ್ಜಿವಹಿಸಿ ಕೆಲಸ ಮಾಡಿದ್ದಾರೆ. ಪ್ರಥಮ ಹಂತದಲ್ಲಿ 700 ನಿವೇಶನಗಳನ್ನು ರಚಿಸಿ 50% ನಿವೇಶನಗಳನ್ನು ಸಮಾಜದ ದುರ್ಬಲ ವರ್ಗದವರಿಗೆ ಹಂಚಿಕೆ ಮಾಡಲಿದ್ದೇವೆ. ಉದ್ಯಾನವನ, ವಾಕಿಂಗ್ ಟ್ರ್ಯಾಕ್, ವಿದ್ಯುದ್ದೀಪ ಸೇರಿದಂತೆ ಎಲ್ಲವನ್ನು ಒಳಗೊಂಡ ಸುಸಜ್ಜಿತ ನಿವೇಶನಗಳನ್ನು ನಿರ್ಮಾಣ ಮಾಡಲಿದ್ದೇವೆ. ಎರಡನೇ ಹಂತದಲ್ಲಿ 300 ನಿವೇಶನಗಳನ್ನು ಇದೇ ಪರಿಸರದಲ್ಲಿ ನಿರ್ಮಾಣ ಮಾಡಲಿದ್ದು ಇದರಿಂದ ಪ್ರಕೃತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಿದ್ದೇವೆ. ಮಂಗಳೂರು ನಗರದಲ್ಲಿ 40, ಗ್ರಾಮಾಂತರ ಭಾಗದಲ್ಲಿ 30 ಪಾರ್ಕ್ ಗಳ ಅಭಿವೃದ್ಧಿಯನ್ನು ಮುಡಾ ಕೈಗೆತ್ತಿಕೊಂಡಿದೆ. ಕೆರೆ ಅಭಿವೃದ್ಧಿ, ಸರ್ಕಲ್ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಜನಪರವಾಗಿ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ” ಎಂದರು.
ವೇದಿಕೆಯಲ್ಲಿ ಚೇಳಾಯರು ಗ್ರಾ.ಪಂ. ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಿಡಿಒ ನಿತ್ಯಾನಂದ, ಮುಡಾ ಸದಸ್ಯ ಜಯಾನಂದ, ದಿವಾಕರ ಸಾಮಾನಿ, ಮುಡಾ ಅಭಿಯಂತರರಾದ ಉಷಾ, ಮುಡಾ ಇಂಜಿನಿಯರ್ ಆರತಿ, ನಗರ ಯೋಜನಾಧಿಕಾರಿ ಕಿರಣ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.