“ಯುವಶಕ್ತಿಯ ಸಮಾಜಪರ ಕಾಳಜಿಯನ್ನು ಬೆಂಬಲಿಸಬೇಕಿದೆ” -ಇನಾಯತ್ ಅಲಿ

ಸುರತ್ಕಲ್: ಸೇವಾಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಕ್ರೀಡಾಕೂಟ ಇತ್ತೀಚಿಗೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, “ಯುವಜನರು ಸೇವಾಶಿಖರ್ ನಂತಹ ಸಂಘಟನೆಯನ್ನು ಕಟ್ಟಿಕೊಂಡು ನಶಿಸುತ್ತಿರುವ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಯನ್ನು ಇನ್ನಷ್ಟು ಬೆಳೆಸಲು ಪಣ ತೊಡಬೇಕು. ಸಮಾಜ ಸೇವೆಯಲ್ಲಿ ಹೆಸರು ಪಡೆದಿರುವ ಸಂಘಟನೆಗೆ ನಾವೆಲ್ಲರೂ ಬೆಂಬಲ ನೀಡಬೇಕು” ಎಂದರು. ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ, “ಸೇವಾಶಿಖರ್ ಸಂಘಟನೆ ಕೇವಲ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಸ್ಕಾಲರ್ ಶಿಪ್, ಆರ್ಥಿಕ ನೆರವು ನೀಡುತ್ತಾ ಬಂದಿದೆ. ಈ ಮೂಲಕ ಮಾದರಿ ಸಂಘಟನೆಯಾಗಿ ಬೆಳೆದಿದೆ” ಎಂದರು.
ವೇದಿಕೆಯಲ್ಲಿ ಆಶಾಜ್ಯೋತಿ ರೈ ಮಾಲಾಡಿ, ಮಾಸ್ಟರ್ ಟ್ರಾವೆಲ್ಸ್ ಮಾಲಕ ಶಬೀರ್ ನವಾಬ್, ಸಚಿನ್ ಶೆಟ್ಟಿ, ಸುಜಿತ್ ಪ್ರತಾಪ್, ಪ್ರೀತಮ್ ರೈ, ಲೋಕೇಶ್ ಶೆಟ್ಟಿ ಕೊಡೆತ್ತೂರು, ಗೋಲ್ಡ್ ಫಿಂಚ್ ನ ಪ್ರಸಾದ್ ಕುಮಾರ್ ಶೆಟ್ಟಿ, ಸೇವಾ ಶಿಖರ್ ಮೆನೇಜಿಂಗ್ ಟ್ರಷ್ಟಿ ವರುಣ್ ಶೇಣವ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ತತ್ವಮಸಿ ಬಗಂಬಿಲ ತಂಡ ಪ್ರಥಮ ಸ್ಥಾನ ಹಾಗೂ ಎಸ್ ಡಿಎಂ ಉಜಿರೆ ದ್ವಿತೀಯ ಸ್ಥಾನ ಗೆದ್ದುಕೊಂಡಿತು.

error: Content is protected !!