ಸುರತ್ಕಲ್: ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ “ಬಿಎಂಆರ್ ಗ್ರೂಪ್” ನೂತನ ಪ್ರಧಾನ ಕಚೇರಿ ಉದ್ಘಾಟನಾ ಸಮಾರಂಭ ಮಾ.5ರಂದು ಬೆಳಗ್ಗೆ ನಡೆಯಲಿದೆ ಎಂದು ಸಂಘಟನೆಯ ಎಂ.ಡಿ. ದಾವೂದ್ ಹಕೀಮ್ ಕೃಷ್ಣಾಪುರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಳಿಕ ಮಾತಾಡಿದ ಅವರು, “ಸಮಾಜದಲ್ಲಿ ಆರ್ಥಿಕ ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಬಡ ಹೆಣ್ಣುಮಕ್ಕಳ ಮದುವೆಯಂತಹ ಪುಣ್ಯ ಕಾರ್ಯಗಳಿಗೆ ಬಿಎಂಆರ್ ಗ್ರೂಪ್ ಕಳೆದ ಹಲವು ವರ್ಷಗಳಿಂದ ಸ್ಪಂದಿಸುತ್ತಿದ್ದು ಇಲ್ಲಿಯವರೆಗೆ ಎಲ್ಲೂ ಪ್ರಚಾರವನ್ನು ಪಡೆದುಕೊಳ್ಳಲು ಬಯಸಿಲ್ಲ. ಮುಂದೆಯೂ ಸಾಮಾಜಿಕ ಕಾಳಜಿ ನಿರಂತರವಾಗಿ ನಡೆಯಲಿದೆ. ಯಾವುದೇ ಜಾತಿ ಮತವಿರಲಿ, ನೊಂದವರ ಪರವಾಗಿ ನಾವು ನಿಲ್ಲುತ್ತೇವೆ” ಎಂದರು.
ಉದ್ಘಾಟನೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ನೆರವೇರಿಸಲಿದ್ದಾರೆ. ಬಿಎಂಆರ್ ಗ್ರೂಪ್ ಚೇರ್ ಮೆನ್ ಹಾಜಿ ಇಬ್ರಾಹಿಂ, ಬದ್ರಿಯಾ ಜುಮಾ ಮಸೀದಿ ಕೃಷ್ಣಾಪುರ ಇದರ ಅಧ್ಯಕ್ಷ ಹಾಜಿ ಬಿ.ಎ. ಮುಮ್ತಾಜ್ ಅಲಿ ಉಪಸ್ಥಿತರಿರಲಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದ್ದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಮೊಯಿದೀನ್ ಬಾವಾ, ಮಂಗಳೂರು ಉತ್ತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಪಾಲ್ಗೊಳ್ಳಲಿದ್ದಾರೆ.
ವಿದ್ವಾನ್ ಕೆ. ನಾರಾಯಣ, ಡಾ. ದಿವ್ಯಜ್ಯೋತಿ, ಸಮದ್ ಗಡಿಯಾರ, ಮುಹಮ್ಮದ್ ಶಾರಿಕ್, ಮುಹಮ್ಮದ್ ಇಶಾಕ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಹನೀಫ್, ವಿಜೆ ಡಿಕ್ಸನ್ ಉಪಸ್ಥಿತರಿದ್ದರು.
ಇಬ್ಬರು ಪತ್ರಕರ್ತರಿಗೆ ಆರ್ಥಿಕ ನೆರವು!
ಬಿಎಂಆರ್ ಗ್ರೂಪ್ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾದ ಸುರತ್ಕಲ್ ಭಾಗದ ಇಬ್ಬರು ಪತ್ರಕರ್ತರಿಗೆ ಆರ್ಥಿಕ ನೆರವು ನೀಡುವುದಾಗಿ ಇದೇ ಸಂದರ್ಭದಲ್ಲಿ ಸಂಸ್ಥೆಯ ಎಂಡಿ ದಾವೂದ್ ಹಕೀಮ್ ಕೃಷ್ಣಾಪುರ ಹೇಳಿದರು. ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡುವವರು. ಹೀಗಾಗಿ ಅವರಿಗೆ ಏನಾದರೂ ಸಮಸ್ಯೆ ಉಂಟಾದಾಗ ಅವರ ಮತ್ತು ಅವರ ಕುಟುಂಬದ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ” ಎಂದು ಹೇಳಿದರು.