ಸುರತ್ಕಲ್: ಇಲ್ಲಿನ ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಇಂದು ಆರಂಭವಾದ ಗ್ರಾಮ ಭೇಟಿ ಕಾಂಗ್ರೆಸ್ ಗ್ಯಾರಂಟಿ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಜನರಿಂದ ಬಾರಿ ಸ್ಪಂದನೆ ವ್ಯಕ್ತವಾಗಿದೆ.
ಸಹಸ್ರಾರು ಕಾರ್ಯಕರ್ತರ ಜೊತೆ ಅಡ್ಯಾರ್ ಪರಿಸರದ ಪ್ರತೀ ಮನೆಗಳಿಗೆ ಭೇಟಿ ನೀಡುತ್ತಿರುವ ಇನಾಯತ್ ಅಲಿ ಅವರು ಕಾಂಗ್ರೆಸ್ ಪಕ್ಷ ಘೋಷಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಗ್ಯಾರಂಟಿ ಪತ್ರಗಳನ್ನು ವಿತರಿಸಿ ಹಾಗೂ ಜನರಿಗೆ ಅದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ವಿವರಿಸಿ ಕಾರ್ಯಕರ್ತರ ಮೂಲಕ ಗ್ಯಾರಂಟಿಗಾಗಿ ನೋಂದಾಯಿಸುತ್ತಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಪ್ರತಿ ವಾರ್ಡ್ ಹಾಗೂ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಕೊಡುಗೆಗಳನ್ನು ಜನರಿಗೆ ತಲುಪಿಸುವ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇನಾಯತ್ ಅಲಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಈ ವಿನೂತನ ಕಾರ್ಯಕ್ರಮವು ಪಕ್ಷದ ಮೇಲೆ ಭರವಸೆ ಕಳೆದುಕೊಂಡಿರುವ ಕಾರ್ಯಕರ್ತರಿಗೂ ಸಾಕಷ್ಟು ಬಲ ತುಂಬಿದಂತಾಗಿದೆ. ಸುಡು ಬಿಸಿಲಿನ ಮಧ್ಯೆಯೂ ಕಾರ್ಯಕರ್ತರು ಬಹಳ ಹುಮ್ಮಸ್ಸಿನಿಂದ ಪಕ್ಷದ ಘೋಷಣೆಗಳೊಂದಿಗೆ ನಾಯಕರ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಪ್ರಥ್ವಿರಾಜ್ ಆರ್.ಕೆ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಆಳ್ವ, ಕಾಂಗ್ರೆಸ್ ಮುಖಂಡರಾದ ಎಂ.ಜಿ.ಹೆಗ್ಡೆ, ಸದಾಶಿವ ಶೆಟ್ಟಿ, ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಝೀನತ್, ಸದಸ್ಯರಾದ ದಾಮೋದರ ಶೆಟ್ಟಿ, ರೋನಾಲ್ಡ್ ಪಾಸ್ಕಲ್ ಸಲ್ದಾನ, ಫ್ಲಾವ್ಯ ಡಿಸೋಜ, ಅನಿತಾ ಡಿಸೋಜ, ಶಬೀರ್, ತುಳಸಿ, ಅಶ್ರಫ್, ಲವೀನಾ, ಖತೀಜ ಹಾಗೂ ಇನ್ನಿತರರು ಹಾಜರಿದ್ದರು.