📝-ಶಶಿ ಬೆಳ್ಳಾಯರು
“ಗಗ್ಗರ” ಸಿನಿಮಾಕ್ಕೆ ರಾಜ್ಯ, ರಾಷ್ಟ್ರಪ್ರಶಸ್ತಿ ಪಡೆದಿದ್ದ ನಿರ್ದೇಶಕ ಮಿತ್ರ ಶಿವಧ್ವಜ್ ಅವರು ಈ ಬಾರಿ “ಕೊರಮ್ಮ” ಅನ್ನೋ ಕಲಾತ್ಮಕ ಸಿನಿಮಾ ತಗೊಂಡು ಪ್ರೇಕ್ಷಕನ ಮುಂದೆ ಬಂದಿದ್ದಾರೆ. ಅಡ್ಯಾರ್ ಮಾಧವ ನಾಯಕ್ ಅರ್ಪಿಸಿರುವ ಕಮರ್ಷಿಯಲ್ ಅಲ್ಲದ ಕೊರಮ್ಮ ಸಿನಿಮಾಕ್ಕೆ ಕತೆಯೇ ಜೀವಾಳ. ಇನ್ನು ಚಿತ್ರದ ಮೌಲ್ಯ ಹೆಚ್ಚಿಸಿದ್ದು ರಂಗಭೂಮಿ ನಟಿ ರೂಪಾ ವರ್ಕಾಡಿ, ಮೋಹನ್ ಶೇಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು ಹಾಗೂ ಗುರು ಹೆಗ್ಡೆಯಂತಹ ಅಪ್ಪಟ ಕಲಾವಿದರು.
ಕೊರಮ್ಮ ನಮ್ಮ ತುಳುನಾಡ ಮಣ್ಣಿನ 80ರ ದಶಕದ ಚಿತ್ರವಾದರೂ ಇಂದಿಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂಥ ಸಾಕಷ್ಟು ಕತೆಗಳು ಜೀವಂತಿಕೆ ಪಡೆದುಕೊಳ್ಳುತ್ತೆ. ಮೇಲು ಕೀಳು, ಬೇಧ ಭಾವ, ಜಾತಿಗಳ ನಡುವಿನ ಸಂಘರ್ಷ ಇವೆಲ್ಲವನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ನಮ್ಮದು ಮೇಲು ಜಾತಿ, ಅವರದ್ದು ಕೀಳು ಜಾತಿ ಎಂದು ವಿಂಗಡಿಸಿ ಕೀಳಾಗಿ ನಡೆಯಿಸಿಕೊಳ್ಳುವ ನಮ್ಮವರು ಕೊರಮ್ಮ ಚಿತ್ರವನ್ನು ಒಮ್ಮೆ ನೋಡಲೇಬೇಕು.
ಮಂಜಯ್ಯ ಹೆಗ್ಡೆ ಎಂಬ ಗುತ್ತಿನ ಯಜಮಾನನ ಗತ್ತು, ಪತ್ನಿ ದೇವಕಿ ಅನ್ನೋ ಶಾಂತಮೂರ್ತಿ. ಈ ಎರಡು ಪಾತ್ರಗಳು ಚಿತ್ರ ಮುಗಿದ ಬಳಿಕವೂ ಕಾಡದೇ ಇರದು. ಮಂಜಯ್ಯರಾಗಿ ಕಿರುತೆರೆಯ ಹೆಸರಾಂತ ಕಲಾವಿದ ಗುರು ಹೆಗ್ಡೆ ದೇವಕಿಯಾಗಿ ರಂಗಭೂಮಿ ನಟಿ ರೂಪಾ ವರ್ಕಾಡಿ ಇಬ್ಬರದೂ ಪಳಗಿದ, ಮಾಗಿದ ನಟನೆ. ಕೊರಮ್ಮ ಸಿನಿಮಾ ಇಂಥ ಕಾರಣಗಳಿಗೆ ಇನ್ನಷ್ಟು ಆಪ್ತವಾಗಬಲ್ಲುದು. ಇನ್ನು ಪಟ್ಟಣದಲ್ಲಿ ಕಲಿತು ಊರು ಸೇರುವ ಮಗನ ಪಾತ್ರದಲ್ಲಿ ಜಿನಪ್ರಸಾದ್ ರ ಅಭಿನಯ ಚಿತ್ರದ ಗಾಂಭೀರ್ಯ ಹೆಚ್ಚಿಸುತ್ತೆ. ಬಿಂದು ರಕ್ಷಿದಿ, ದಿವ್ಯಶ್ರೀ ನಾಯಕ್ ಪಾತ್ರ ಆಕರ್ಷಣೆ ಉಳಿಸಿಕೊಳ್ಳುತ್ತೆ.
ಚಿತ್ರದ ಪ್ರಧಾನ ಆಕರ್ಷಣೆ ಕೊರಮ್ಮ ಅನ್ನುವ “ಉಳ್ಳಾಯ”ನ ಮೇಲಿನ ಪ್ರೀತಿ, ಅಕ್ಕರೆ, ಕಾಳಜಿ ತೋರಿಸುವ ಮುದ್ದಾದ ಪಾತ್ರ. ಪ್ರತೀ ಪಾತ್ರದಲ್ಲೂ ತನ್ನ ಉಳ್ಳಾಯ(ಧಣಿ)ನ ಬಗ್ಗೆ ಅಪಾರ ನಂಬಿಕೆ, ವಿಶ್ವಾಸ ತೋರಿಸುವ ಕೊರಮ್ಮ ಧಣಿಯ ಮನೆಯ ಅಂಗಳದಲ್ಲೇ ಪ್ರಾಣ ಬಿಟ್ಟಾಗ ಕಣ್ಣಂಚು ತೇವವಾಗದಿರದು. ಇದು 80ರ ದಶಕ ಮಾತ್ರವಲ್ಲ, ಇಂದಿಗೂ ಅದೆಷ್ಟೋ ಧಣಿ ಒಕ್ಕಲುಗಳಲ್ಲಿ, ಗುತ್ತು ಬರ್ಕೆಗಳಲ್ಲಿ ಕಂಡುಬರುವ ಧಣಿ ಮತ್ತು ಚಾಕರಿಯವನ ಒಡನಾಟ, ಸಮಾಜದ ಮೇಲು ಕೀಳೆಂಬ ಅನಿಷ್ಟದ ಸಂಘರ್ಷ. ಇದನ್ನು ಶಿವಧ್ವಜ್ ಬಹಳಷ್ಟು ಪರಿಣಾಮಕಾರಿಯಾಗಿ ತೋರಿಸುವಲ್ಲಿ ಸಫಲರಾಗಿದ್ದಾರೆ.
ಕೊರಮ್ಮ ಇನ್ನೊಂದಷ್ಟು ಕಾರಣಗಳಿಗೆ ಇಷ್ಟವಾಗುತ್ತೆ, ತುಳುನಾಡಿನ ಡೋಲು, ಕೊಳಲಿನ ಹಿನ್ನೆಲೆ ಸಂಗೀತ, ನೆರಳು ಬೆಳಕು, ಮಳೆಯನ್ನು ಸಹಜವಾಗಿ ಕಟ್ಟಿಕೊಟ್ಟ ಸುರೇಶ್ ಭೈರಸಂದ್ರ ಅವರ ಕೆಮರಾ ಕೈಚಳಕ ಇತ್ಯಾದಿ…
ಕೊರಮ್ಮ ನಮ್ಮ ನಡುವಿನ ಸಿನಿಮಾ, ನಮ್ಮ ತುಳುನಾಡ ಸೊಗಡಿನ ಕಂಡು ಕೇಳಿದ ಬದುಕು ಬವಣೆ. ರಾಷ್ಟ್ರಪ್ರಶಸ್ತಿ ಪಡೆಯಲು ಎಲ್ಲ ಅರ್ಹತೆ ಹೊಂದಿರುವ ಸಿನಿಮಾ. ವಾರಾಂತ್ಯವನ್ನು ಪರಿಪೂರ್ಣಗೊಳಿಸಿದ ಒಂದೊಳ್ಳೆ ಕಲಾಕೃತಿ. ಕಲಾತ್ಮಕ ಸಿನಿಮಾಗಳನ್ನು ಇಷ್ಟಪಡುವವರು “ಕೊರಮ್ಮ”ನನ್ನು ಬೇಷರತ್ ಒಪ್ಪಿಕೊಳ್ಳಬಹುದು. ಕಾಡುವ ಪಾತ್ರಗಳ ಬಗ್ಗೆ ಮನದಲ್ಲೇ ಚರ್ಚೆ ಮಾಡಬಹುದು.