ಮಂಗಳೂರು: ಕಳೆದೆರಡು ವರ್ಷಗಳಿಂದ ಉಳ್ಳಾಲ ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಇದರ ವಿರುದ್ಧ ಸೋಮವಾರ ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಪಕ್ಷದ ಪ್ರಕಟಣೆ ಹೇಳಿದೆ.
ಹಲವಾರು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಮನೆ ತೆರಿಗೆ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಮಾ.27ರ ಸೋಮವಾರ ಬೆಳಗ್ಗೆ 10:30ಕ್ಕೆ ಸರಿಯಾಗಿ ಉಳ್ಳಾಲ ನಗರ ಸಭೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಹಿಂದೆಯೂ ಭ್ರಷ್ಟಾಚಾರದ ವಿರುದ್ಧ ಪಕ್ಷವು ಹೋರಾಟ ನಡೆಸಿದ್ದು ನ್ಯಾಯ ಪಾಲನೆ ವಿಷಯದಲ್ಲಿ ಯಾವತ್ತೂ ಪಕ್ಷ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎಸ್ ಡಿಪಿಐ ಉಳ್ಳಾಲ ನಗರ ಸಮಿತಿ ಅಧ್ಯಕ್ಷರಾದ ಎ.ಆರ್. ಅಬ್ಬಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.