ಸುರತ್ಕಲ್: ಕೋಟಿ ಚೆನ್ನಯ ಸೇವಾ ಬ್ರಿಗೇಡ್(ರಿ.) ಮಂಗಳೂರು ಇದರ ಆಶ್ರಯದಲ್ಲಿ ಕಿರಣ್ ಕುಮಾರ್ ಕೋಡಿಕಲ್ ಸಾರಥ್ಯದಲ್ಲಿ ಫೆ.19ರಂದು ಸಂಜೆ 4ರಿಂದ “ಕೋಟಿ ಚೆನ್ನಯ ಟ್ರೋಫಿ 2023” ಹಗ್ಗ ಜಗ್ಗಾಟ ಕ್ರೀಡಾಕೂಟ ನಡೆಯಲಿದ್ದು, ಇದರ ಟ್ರೋಫಿ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮ ಶುಕ್ರವಾರ ಸಂಜೆ ಬಂಗ್ರಕೂಳೂರಿನಲ್ಲಿ ಜರುಗಿತು.
ಅರೆಸ್ಸೆಸ್ ಜಿಲ್ಲಾ ಪ್ರಮುಖರಾದ ಸುನಿಲ್ ಆಚಾರ್ ಮತ್ತು ಮನೋಹರ್ ಕೋಡಿಕಲ್ ಅವರು, ಜಂಟಿಯಾಗಿ ಟ್ರೋಫಿ ಅನಾವರಣ ಗೊಳಿಸಿ, “ಪಾಲಿಕೆ ಸದಸ್ಯ ಕಿರಣ್ ಕುಮಾರ್ ಅವರು ಹಾಗೂ ಕೋಟಿಚೆನ್ನಯ ಸೇವಾ ಬ್ರಿಗೇಡ್ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಗ್ಗ ಜಗ್ಗಾಟದಂತಹ ಕ್ರೀಡೆಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯ” ಎಂದರು.
ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದ ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಅವರು, “ಈಗಾಗಲೇ 40 ತಂಡಗಳು ನೋಂದಣಿಯನ್ನು ಮಾಡಿಕೊಂಡಿವೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಉತ್ತರ ಕನ್ನಡ ನಾಲ್ಕೂ ಜಿಲ್ಲೆಗಳ ಕ್ರೀಡಾಳುಗಳಿಗೆ ಆಹ್ವಾನ ನೀಡಿದ್ದೇವೆ. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರ ಉಪಸ್ಥಿತಿ ಯಲ್ಲಿ ಕ್ರೀಡಾಕೂಟಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಚಾಲನೆ ನೀಡಲಿದ್ದಾರೆ. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಸಹಿತ ಗಣ್ಯರು ಉಪಸ್ಥಿತರಿರಲಿದ್ದಾರೆ. ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ನಗದು ಹಾಗೂ ಟ್ರೋಫಿ ಬಹುಮಾನವಿರಲಿದೆ” ಎಂದರು.
ಕ್ರೀಡೆಯ ಒಟ್ಟಿಗೆ ಬಡ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶವಿದೆ .ಇದಕ್ಕಾಗಿ ವಿಶೇಷ ಸಮಾಜ ಸೇವೆ ಮಾಡುತ್ತಾ ಬಂದಿರುವ ಗಣ್ಯರ ಮೂಲಕ ಕೊಡಲಾಗುವುದು ಎಂದರು. ವೇದಿಕೆಯಲ್ಲಿ ಪ್ರಮುಖರಾದ ರಮೇಶ್ ಶೆಟ್ಟಿ, ಸದಾನಂದ ಅಂಚನ್, ನಯನಾ ಕೋಟ್ಯಾನ್, ರೋಹನ್, ಉಮೇಶ್ ಮಲರಾಯಸಾನ ಮತ್ತಿತರರು ಉಪಸ್ಥಿತರಿದ್ದರು.