ಮಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ, ಹಾಲಿ ವಿರೋಧ ಪಕ್ಷದ ನಾಯಕರು ಹಾಗೂ ಸರ್ವ ಜನಾಂಗದ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಅವರ ವಿರುದ್ಧ ಪ್ರಚೋದನಕಾರಿಯಾಗಿ ನಾಲಿಗೆ ಹರಿಬಿಟ್ಟ ಸಚಿವ ಅಶ್ವಥ್ ನಾರಾಯಣ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಿ, ಸುಮೋಟೋ ಪ್ರಕರಣ ದಾಖಲಿಸಿ ಬಂಧಿಸುವಂತೆ ಐಒಸಿ ಮುಖಂಡ ಇಕ್ಬಾಲ್ ಕಣ್ಣೂರು ಅವರು ಒತ್ತಾಯಿಸಿದ್ದಾರೆ.
ಅಶ್ವಥ್ ನಾರಾಯಣ ಅವರ ದುರಹಂಕಾರಿ ಹೇಳಿಕೆಯಿಂದ ಸಿದ್ದರಾಮಯ್ಯ ಅವರಿಗಾಗಲಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗಾಗಲಿ ಯಾವುದೇ ಆತಂಕ, ಆಶ್ಚರ್ಯ ಆಗಿಲ್ಲ, ಯಾಕೆಂದರೆ ರಾಷ್ಟ್ರಪಿತ ಗಾಂಧೀಜಿ ಅವರನ್ನು ಕೊಂದವರನ್ನೇ ಆರಾಧಿಸುತ್ತಿರುವ ಬಿಜೆಪಿ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ? ಅಶ್ವಥ್ ನಾರಾಯಣ್ ಬಹಿರಂಗವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ ನಂತರವೂ ಅವರ ವಿರುದ್ಧ ಪೋಲಿಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವ ವರ್ಗ ಜೀವಂತವಾಗಿಲ್ಲ, ಸರಕಾರ ಸತ್ತು ಹೋಗಿದೆ ಎಂದರ್ಥ. ಇದರಿಂದ ಬಿಜೆಪಿ ಪಕ್ಷದ ಸಂಸ್ಕೃತಿ ಏನು ಎಂಬುದನ್ನು ಜನರು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.