ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ 14ನೇ ವರ್ಷದ ರಕ್ತದಾನ ಶಿಬಿರ

ಮಂಗಳೂರು: ಹೆಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಉಡುಪಿ, ಕೆಎಂಸಿ ಬ್ಲಡ್ ಬ್ಯಾಂಕ್ ಮಂಗಳೂರು ಸಹಯೋಗದಲ್ಲಿ 14ನೇ ವರ್ಷದ ರಕ್ತದಾನ ಶಿಬಿರ ಶುಕ್ರವಾರ ನಗರದ ಭಾಳಂಭಟ್ ಹಾಲ್ ನಲ್ಲಿ ಜರುಗಿತು.
ಶಿಬಿರವನ್ನು ಮಂಗಳೂರು ಸಹಾಯಕ ಪೊಲೀಸ್ ಕಮಿಷನರ್ ಗೀತಾ ಕುಲಕರ್ಣಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ,ಮಾತನಾಡಿದರು. “ರಕ್ತದಾನ ದಾನಗಳಲ್ಲೇ ಶ್ರೇಷ್ಠವಾದ ದಾನ. ರಕ್ತದಾನಿಗಳು ಸಮಾಜಕ್ಕೆ ಸಲ್ಲಿಸುವ ಮಹತ್ಕಾರ್ಯ” ಎಂದು ಅಭಿಪ್ರಾಯಪಟ್ಟರು.
ನಂತರ ಮಾತಾಡಿದ ಬಾಲಕೃಷ್ಣ ಮುದ್ದೋಡಿ ಅವರು, “ನಾವು ನಿಯಮಿತವಾಗಿ ರಕ್ತ ನೀಡುವ ಮೂಲಕ ಇನ್ನೊಬ್ಬರ ಪ್ರಾಣ ಉಳಿಸಬಹುದು ಮಾತ್ರವಲ್ಲದೆ ಅವರ ಕುಟುಂಬದಲ್ಲಿ ನಗುವಿಗೆ ಕಾರಣವಾಗಬಹುದು. ಆದ್ದರಿಂದ ರಕ್ತದಾನದ ಮಹತ್ವವನ್ನು ಅರಿತು ಎಲ್ಲರೂ ರಕ್ತದಾನ ಮಾಡಿ. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಈ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮಾತ್ರವಲ್ಲ ರಾಜ್ಯದ ಎಲ್ಲಾ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್ ಗಳ ಜೊತೆಗೆ ಸಂಪರ್ಕ ಇರಿಸಿರುವ ಸಂಘಟನೆಯ ಸ್ಥಾಪಕ ಸತೀಶ್ ಸಾಲಿಯಾನ್ ಅವರು ಕೊರೋನಾದ ಸಂಧಿಗ್ಧ ಕಾಲಘಟ್ಟದಲ್ಲೂ 100ಕ್ಕೂ ಹೆಚ್ಚು ಬ್ಲಡ್ ಕ್ಯಾಂಪ್ ಗಳನ್ನು ಆಯೋಜಿಸುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ” ಎಂದರು.
ಕೆಎಂಸಿ ಬ್ಲಡ್ ಬ್ಯಾಂಕ್ ನ ದೀಪಾ ಅಡಿಗ ಮಾತಾಡುತ್ತಾ, “ರಕ್ತದಾನದಿಂದ ನಮ್ಮ ದೇಹಾರೋಗ್ಯಕ್ಕೆ ಅನೇಕ ಲಾಭಗಳಿವೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಇದು ಸಹಕರಿಯಾಗಿದೆ. ಕಾಲಕಾಲಕ್ಕೆ ರಕ್ತದಾನ ಮಾಡುವ ಮೂಲಕ ಆರೋಗ್ಯವಂತರಾಗಿ ಜೀವನ ಸಾಗಿಸಬಹುದು” ಎಂದರು.
ವೇದಿಕೆಯಲ್ಲಿ ಎಸಿಪಿ ಗೀತಾ ಕುಲಕರ್ಣಿ, ಬಾಲಕೃಷ್ಣ ಮುದ್ದೋಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಸತೀಶ್ ಸಾಲಿಯಾನ್, ಕೆಎಂಸಿ ಬ್ಲಡ್ ಬ್ಯಾಂಕ್ ನ ದೀಪಾ ಅಡಿಗ, ಚಿದಾನಂದ ಶೆಟ್ಟಿ, ವಿಜಯ ಡಿ.ಕೆ., ಮೋಹನ್ ಕುಮಾರ್,ಮನೋಜ್ ಪುತ್ರನ್ ಉಪಸ್ಥಿತರಿದ್ದರು.

error: Content is protected !!