ಸುರತ್ಕಲ್: ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಅವರು ಮಂಗಳೂರು ಉತ್ತರ ಮತ್ತು ಮೂಲ್ಕಿ ಮೂಡಬಿದ್ರೆ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ಹೈಕಮಾಂಡ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಮಂಗಳೂರು ಉತ್ತರದಲ್ಲಿ ಟಿಕೆಟ್ ಗಾಗಿ ಲಾಬಿ ಜೋರಾಗಿ ನಡೆಯುತ್ತಿದ್ದು ಮಾಜಿ ಶಾಸಕ ಮೊಯಿದೀನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಟಿಕೆಟ್ ಆಕಾಂಕ್ಷಿಗಳಾಗಿ ಮುಂಚೂಣಿಯಲ್ಲಿದ್ದಾರೆ. ಇವರಲ್ಲದೆ ಮಮತಾ ಗಟ್ಟಿ, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಲುಕ್ಮಾನ್ ಬಂಟ್ವಾಳ, ಪುರುಷೋತ್ತಮ ಚಿತ್ರಾಪುರ ಹಾಗೂ ಇತರರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಉತ್ತರದಲ್ಲಿ ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಕಾದಾಟ ಜೋರಾಗಿದ್ದು ಈಗಾಗಲೇ ಕೆಲವರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಪ್ರತಿಭಾ ಕುಳಾಯಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದತ್ತ ಕಣ್ಣು ನೆಟ್ಟಿದ್ದು ಅಲ್ಲಿಗೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅಲ್ಲಿ ಕಳೆದ ಬಾರಿ ಆಕಾಂಕ್ಷಿಯಾಗಿದ್ದು ಈ ಬಾರಿಯೂ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಈ ಬಾರಿ ಎರಡೂ ಕ್ಷೇತ್ರಗಳು ಟಿಕೆಟ್ ಆಕಾಂಕ್ಷಿಗಳಿಂದ ಈಗಲೇ ರಂಗೇರಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಸುರತ್ಕಲ್ ಟೋಲ್ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪ್ರತಿಭಾ ಕುಳಾಯಿ ಜನಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದಾರೆ.