ಮಂಗಳೂರು: ಇನ್ನೇನು ಕೆಲವೇ ಹೊತ್ತಲ್ಲಿ ಮಂಗಳೂರು ಭಯಾನಕ ಬಾಂಬ್ ಸ್ಫೋಟಕ್ಕೆ ತುತ್ತಾಗಬೇಕಿತ್ತು. ಆದರೆ ಮಂಗಳೂರಿಗರ ಅದೃಷ್ಟ ಚೆನ್ನಾಗಿತ್ತು. ಮೈಸೂರಲ್ಲಿ ಕುಕ್ಕರ್ ಬಾಂಬ್ ತಯಾರಿಸಿ ಅದನ್ನು ಸರಕಾರಿ ಬಸ್ ನಲ್ಲಿ ತಂದು ನಗರದ ಹೊರವಲಯದ ಪಡೀಲ್ ಬಳಿ ಬಸ್ಸಲ್ಲಿ ಇಳಿದು ನಗರಕ್ಕೆ ಹೋಗಲು ಆಟೋ ಹಿಡಿದಿದ್ದ ಆ ಶಂಕಿತ ಉಗ್ರ ಆಟೋದಲ್ಲಿ ಏಕಾಏಕಿ ಬಾಂಬ್ ಸ್ಫೋಟಗೊಂಡ ಪರಿಣಾಮ ಗಂಭೀರ ಗಾಯಗೊಂಡು ಫಾದರ್ ಮುಲ್ಲರ್ ಆಸ್ಪತ್ರೆ ಸೇರಿದ್ದಾನೆ. ಅಲ್ಲಿಗೆ ದೊಡ್ಡದೊಂದು ದುರಂತ ನಡೆಯುವುದು ಸ್ವಲ್ಪದರಲ್ಲೇ ತಪ್ಪಿದಂತಾಗಿದೆ.
ಗಾಯಗೊಂಡವನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಮುಹಮ್ಮದ್ ಶಾರಿಕ್(24) ಎಂದು ಗುರುತಿಸಲಾಗಿದೆ. ಈತ ಕೊಣಾಜೆ ಪಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು 2020ರಲ್ಲಿ ಮಂಗಳೂರು ನಗರದಲ್ಲಿ ಕಂಡುಬಂದ ಪ್ರಚೋದನಕಾರಿ ಗೋಡೆ ಬರಹ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ ಎಂದು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಆರೋಪಿ ವಾಸವಿದ್ದ ಮೈಸೂರಿನ ಮನೆಯಿಂದ ಸ್ಫೋಟಕ ಸಂಬಂಧ ಭಾರೀ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.