ಮೂಡಬಿದ್ರೆ: ಬುಧವಾರ ಇಲ್ಲಿನ ಜೈನ್ ಪಿಯು ಕಾಲೇಜಿನ ಪ್ರಥಮ ಪಿಯು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಕೋಟೆಬಾಗಿಲು ನಿವಾಸಿ ಶ್ರೀಧರ ಪುರಾಣಿಕ್(63) ಎಂಬ ವೃದ್ಧನನ್ನು ಮೂಡಬಿದ್ರೆ ಪೊಲೀಸರು ಪೋಕ್ಸೋ, ದಲಿತ ದೌರ್ಜನ್ಯ ಮತ್ತಿತರ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ:
17ರ ಹರೆಯದ ಬಾಲಕಿ ಕಾರ್ಕಳ ಬೈಲೂರು ನಿವಾಸಿಯಾಗಿದ್ದು ಪಡುಕೊಣಾಜೆ ಹೌದಾಲ್ ಗ್ರಾಮದಲ್ಲಿನ ತನ್ನ ಸಂಬಂಧಿಕರ ಮನೆಯಲ್ಲಿದ್ದು ಕಾಲೇಜಿಗೆ ಹೋಗಿ ಬರುತ್ತಿದ್ದಳು. ಮಂಗಳವಾರ ಬಾಲಕಿಗೆ ಕಿವಿ ನೋವು ಕಾಣಿಸಿಕೊಂಡಿದ್ದು ಮನೆಗೆ ಹೋಗುತ್ತೇನೆ ಎಂದಿದ್ದಳು. ಕಾಲೇಜಿನವರು ಮನೆಯವರಿಗೆ ವಿಷಯ ತಿಳಿಸಿದ್ದು ಅವರು ಪರಿಚಯದ ಅದೇ ಕಾಲೇಜಿನಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಶ್ರೀಧರ್ ಪುರಾಣಿಕ್ ಎಂಬಾತನ ಜತೆ ಮನೆಗೆ ಕಳುಹಿಸಿಕೊಡುವಂತೆ ಹೇಳಿದ್ದರು. ಶ್ರೀಧರ್ ಕಾಲೇಜಿಗೆ ಹೋಗಿ ಬಾಲಕಿಯನ್ನು ಮನೆಗೆ ಕರೆತರುವ ದಾರಿಯಲ್ಲಿ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದ್ದ. ಮನೆ ಹತ್ತಿರ ಬಂದರೂ ಆಕೆಯನ್ನು ಕಾರಿನಿಂದ ಇಳಿಯಲು ಬಿಡದೇ ಕಿರುಕುಳ ಮುಂದುವರಿಸಿದ್ದು ಇದರಿಂದ ಆಘಾತಕ್ಕೊಳಗಾಗಿದ್ದಳು. ನಡೆದ ವಿಷಯವನ್ನು ಆಕೆ ಮನೆಯಲ್ಲಿ ತಿಳಿಸಿರಲಿಲ್ಲ. ಬುಧವಾರ ಬೆಳಗ್ಗೆ ಮನೆ ಹತ್ತಿರದ ಹಾಡಿಯಲ್ಲಿ ಚೂಡಿದಾರದ ಶಾಲನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಡೆತ್ ನೋಟ್ ಬರೆದಿದ್ದು ಅದರಲ್ಲಿ ಶ್ರೀಧರನ ಹೆಸರು ಬರೆದು ತನಗೆ ಲೈಂಗಿಕ ಕಿರುಕುಳವಾಗಿರುವುದನ್ನು ಉಲ್ಲೇಖಿಸಿದ್ದಳು.
ಮೃತ ಬಾಲಕಿಯ ಚಿಕ್ಕಮ್ಮ ಆರೋಪಿ ಶ್ರೀಧರ್ ಪುರಾಣಿಕ್ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಇದೇ ಪರಿಚಯದಲ್ಲಿ ಆರೋಪಿ ವಿದ್ಯಾರ್ಥಿನಿಯನ್ನು ಮನೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದ. ಬಾಲಕಿಯ ಫೀಸ್ ಕೂಡ ಆರೋಪಿಯೇ ಕಟ್ಟಿದ್ದ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಎಸಿಪಿ ಮಹೇಶ್ ಕುಮಾರ್ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.