
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಕರ್ನಾಟಕದ ಅತ್ಯಂತ ಸಮೃದ್ದ ಜಿಲ್ಲೆಗಳೆಂದು ಹೆಸರುವಾಸಿಯಾಗಿದ್ದು, ದೇಶದಲ್ಲೇ ಅತ್ಯಧಿಕ ಎನಿಸುವ ವಾರ್ಷಿಕ ತಲಾ ಆದಾಯ ತಲಾ ₹6 ಲಕ್ಷಕ್ಕಿಂತ ಹೆಚ್ಚಿದೆ. ಈ ಆರ್ಥಿಕ ಸಮೃದ್ಧಿ ಮತ್ತು ಈ ಭಾಗಕ್ಕೆ ಇತ್ತೀಚೆಗೆ ಸರ್ಕಾರ ಪ್ರಕಟಿಸಿದ ಪ್ರಮುಖ ಅಭಿವೃದ್ಧಿ ಯೋಜನೆಗಳ ಹೊರತಾಗಿಯೂ, ಇಲ್ಲಿನ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 10 ರಷ್ಟು ಜನರು ಇಂದಿಗೂ ಬಡತನ ರೇಖೆಗಿಂತ ಕೆಳಗೆ (ಬಿ.ಪಿ.ಎಲ್) ಜೀವನ ನಡೆಸುತ್ತಿದ್ದಾರೆ.
ಪ್ರಸ್ತುತ, ಸುಮಾರು 21 ಲಕ್ಷ ಜನಸಂಖ್ಯೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,58,910 ಪಡಿತರ ಚೀಟಿದಾರರಿದ್ದು, ಇವರಿಗೆ 459 ನ್ಯಾಯಬೆಲೆ ಅಂಗಡಿಗಳ ಮೂಲಕ ಸೇವೆ ನೀಡಲಾಗುತ್ತಿದೆ. ಹಾಗೆಯೇ, ಸುಮಾರು 12.5 ಲಕ್ಷ ಜನಸಂಖ್ಯೆ ಹೊಂದಿರುವ ಉಡುಪಿ ಜಿಲ್ಲೆಯಲ್ಲಿ 1,98,265 ಪಡಿತರ ಚೀಟಿದಾರರಿದ್ದು, 295 ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಆಹಾರ ಭದ್ರತೆಗಾಗಿ ರಾಜ್ಯ ಸರ್ಕಾರವು ₹6,200 ಕೋಟಿ ಬಜೆಟ್ ಕಾಯ್ದಿರಿಸಿದ್ದು, ಇದರ ಅಡಿಯಲ್ಲಿ ಬಿ.ಪಿ.ಎಲ್ ಕುಟುಂಬಗಳಿಗೆ ತಿಂಗಳಿಗೆ 35 ಕೆಜಿ ಅಕ್ಕಿ ಹಾಗೂ ಅಂತ್ಯೋದಯ ಅನ್ನ ಯೋಜನೆ (ಎ.ಎ.ವೈ) ಕಾರ್ಡುದಾರರಿಗೆ ತಿಂಗಳಿಗೆ 50 ಕೆಜಿ ಅಕ್ಕಿ ನೀಡಲಾಗುತ್ತಿದೆ.
ಆದರೆ, ವಾಸ್ತವದಲ್ಲಿ ಆಡಳಿತಾತ್ಮಕ ವೈಫಲ್ಯಗಳು ಎದ್ದು ಕಾಣುತ್ತಿವೆ. ಅಗತ್ಯವಿರುವ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ ಉದ್ದನೆಯ ಸರತಿಯಲ್ಲಿ ನಿಲ್ಲುವಂತಾಗಿದೆ. ತಾಂತ್ರಿಕ ದೋಷಗಳು, ಸರ್ವರ್ ಸಮಸ್ಯೆಗಳು ಮತ್ತು ಕಡ್ಡಾಯ ಇ-ಕೆವೈಸಿ (e-KYC) ನವೀಕರಣದಲ್ಲಿನ ವಿಳಂಬದಿಂದಾಗಿ ಪಡಿತರ ವಿತರಣೆ ಪದೇ ಪದೇ ಸ್ಥಗಿತಗೊಳ್ಳುತ್ತಿದೆ. ಇದರಿಂದಾಗಿ ಬಡ ಮತ್ತು ಕೂಲಿ ಕಾರ್ಮಿಕ ಕುಟುಂಬಗಳು ತಮ್ಮ ದಿನಗೂಲಿಯನ್ನು ಕಳೆದುಕೊಂಡು ಪಡಿತರಕ್ಕಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತ ಮತ್ತು ಬಡ ನಾಗರಿಕರನ್ನು ಮೂಲಭೂತ ಅಗತ್ಯಗಳಿಗಾಗಿ ಸುಡುವ ಬಿಸಿಲಿನಲ್ಲಿ ದಿನವಿಡೀ ಸಾಲಿನಲ್ಲಿ ನಿಲ್ಲುವಂತೆ ಮಾಡುವುದು ತಾರತಮ್ಯವಷ್ಟೇ ಅಲ್ಲದೆ, ಮಾನವ ಹಕ್ಕುಗಳು ಮತ್ತು ಆತ್ಮಾಭಿಮಾನದ ನೇರ ಉಲ್ಲಂಘನೆಯಾಗಿದೆ. ಆಮ್ ಆದ್ಮ ಪಾರ್ಟಿ (ಆಪ್) ದಕ್ಷಿಣ ಕನ್ನಡ ಘಟಕವು ಕರ್ನಾಟಕ ಸರ್ಕಾರವನ್ನು ಈ ಕೆಳಗಿನಂತೆ ಆಗ್ರಹಿಸುತ್ತದೆ:
ಪಡಿತರ ಧಾನ್ಯಗಳ ಮನೆ ಬಾಗಿಲಿಗೆ ವಿತರಣೆ (ಡೋರ್‌ಸ್ಟೆಪ್ ಡೆಲಿವರಿ): ಪಡಿತರವನ್ನು ನೇರವಾಗಿ ಫಲಾನುಭವಿಗಳ ಮನೆಗೇ ತಲುಪಿಸುವುದರಿಂದ ಸುದೀರ್ಘ ಸಾಲುಗಳನ್ನು ತಡೆಗಟ್ಟಬಹುದು, ಕಾರ್ಮಿಕರ ದಿನಗೂಲಿ ನಷ್ಟವಾಗುವುದನ್ನು ತಪ್ಪಿಸಬಹುದು ಹಾಗೂ ಕಾಳಸಂತೆ ಮಾರಾಟ ಮತ್ತು ಪಡಿತರ ಅಕ್ರಮ ಹಾದಿ ಹಿಡಿಯುವುದನ್ನು ತಡೆಯಬಹುದು.
ಸಾರ್ವಜನಿಕ ವಿತರಣಾ ವ್ಯವಸ್ಥೆಯ ನವೀಕರಣ ಮತ್ತು ಡಿಜಿಟಲೀಕರಣ: ಸರ್ವರ್ ಸಮಸ್ಯೆಗಳು ಮತ್ತು ಇ-ಕೆವೈಸಿ ವಿಳಂಬವನ್ನು ತಕ್ಷಣವೇ ಸುಧಾರಿತ ಸಾಫ್ಟ್ ವೇರ್ ತಂತ್ರಜ್ಞಾನದ ಮೂಲಕ ಸರಿಪಡಿಸಿ, ಸುಲಭ ಮತ್ತು ತೊಂದರೆರಹಿತ ಪಡಿತರ ವಿತರಣೆಯನ್ನು ಖಚಿತಪಡಿಸಬೇಕು.
ಆಹಾರ ಭದ್ರತೆಯು ಪ್ರತಿಯೊಬ್ಬರ ಮೂಲಭೂತ ಮಾನವ ಹಕ್ಕಾಗಿದೆಯೇ ಹೊರತು ಸರ್ಕಾರದ ದಯೆಯಲ್ಲ. ಪ್ರತಿಯೊಂದು ಅರ್ಹ ಕುಟುಂಬಕ್ಕೂ ಗೌರವಯುತ, ದಕ್ಷ ಮತ್ತು ಪಾರದರ್ಶಕ ರೀತಿಯಲ್ಲಿ ಪಡಿತರ ತಲುಪುವಂತೆ ಮಾಡಲು ಸರ್ಕಾರ ತಕ್ಷಣವೇ ಪಿ.ಡಿ.ಎಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂದು ಎಎಪಿ ದಕ್ಷಿಣ ಕನ್ನಡ ಆಗ್ರಹಿಸುತ್ತದೆ.

ಪತ್ರಿಕಾಗೋಷ್ಟಿಯಲ್ಲಿ ವಾಸುದೇವ್, ಎಸ್.ಎಲ್. ಪಿಂಟೊ, ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿ ಕಬೀರ್ ಕಾಟಿಪಳ್ಳ, ಗ್ಲಾವಿನ್ ಡಿಸೋಜ, ಲೆಸ್ಲಿ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.