ಸುರತ್ಕಲ್: ಬಿಜೆಪಿ ಮಂಗಳೂರು ಉತ್ತರ ಮಂಡಲದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ಪಾದಯಾತ್ರೆ ಹಾಗೂ ಬೃಹತ್ ಪ್ರತಿಭಟನಾ ಸಭೆ ಗುರುವಾರ ಸಂಜೆ ಸುರತ್ಕಲ್ ಪೇಟೆಯಲ್ಲಿ ಜರುಗಿತು.
ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪಾದಯಾತ್ರೆಗೆ ಚಾಲನೆ ನೀಡಿ ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

“ರಾಜ್ಯ ಸರಕಾರ ಜನರ ಮೇಲೆ ತಲಾ ಒಂದೂವರೆ ಲಕ್ಷ ರೂ. ಸಾಲ ಮಾಡಿದೆ. ಡಿಕೆಶಿವಕುಮಾರ್ ಸರಕಾರಿ ಮನೆಗೆ 25 ಕೋಟಿ ರೂ ಸರಕಾರದ ಹಣದಿಂದ ಖರ್ಚು ಮಾಡಿದ್ದಾರೆ. ಅವರು ಮಾತ್ರವಲ್ಲ ಪ್ರತಿಯೊಬ್ಬ ಮಂತ್ರಿಯೂ ಒಂದು ಕೋಟಿಯಷ್ಟು ಖರ್ಚು ಮಾಡಿದ್ದಾರೆ. ರಾಜ್ಯ ಸರಕಾರ ಬೆಳಗ್ಗೆ ಮಕ್ಕಳು ಕುಡಿಯುವ ಹಾಲಿಗೂ ಬೆಲೆ ಏರಿಸಿದ್ದಾರೆ, ಸಂಜೆ ಕುಡಿಯುವ ಆಲ್ಕೋಹಾಲಿಗೂ ಬೆಲೆ ಏರಿಸಿದ್ದಾರೆ. ಕ್ವಾರ್ಟರ್ ಗೆ 50 ರೂ. ಏರಿಸಿರುವ ಭ್ರಷ್ಟ ರಾಜ್ಯ ಸರಕಾರ ಅದರಿಂದ ಗ್ಯಾರಂಟಿ ಯೋಜನೆಗೆ ಹಣ ಹೊಂದಾಣಿಕೆ ಮಾಡುತ್ತಿದೆ“ ಎಂದು ವಾಗ್ದಾಳಿ ನಡೆಸಿದರು.

”ರಾಜ್ಯ ಸರಕಾರಕ್ಕೆ ಯಾವ ಬ್ಯಾಂಕ್ ನವರೂ ಸಾಲ ಕೊಡುತ್ತಿಲ್ಲ. ರಾಜ್ಯದಲ್ಲಿ ನಂಬರ್ ಒನ್ ಲೂಟಿಕೋರ ಯಾರಾದ್ರೂ ಇದ್ದರೆ ಅದು ಮುಖ್ಯಮಂತ್ರಿ ಡಿಕೆ ಶಿವಕುಮಾರ್. ಎಲ್ಲಿ ಹೋದ್ರೂ ಅಭಿವೃದ್ಧಿ ಇಲ್ಲ ಬರೀ ಲೂಟಿ ಮಾತ್ರ. ಡಿಕೆ ಶಿವಕುಮಾರ್ ಮನೆಯಲ್ಲಿ ಮಂತ್ರಿಗಳಿಗೆ ಮೃಷ್ಟಾನ್ನ ಭೋಜನ ಕೊಡ್ತಾರೆ ಅದೇ ಹಾವೇರಿಯಲ್ಲಿ ಆರು ತಿಂಗಳುಗಳಿಂದ ಮಕ್ಕಳು ಮಧ್ಯಾಹ್ನದ ಊಟವಿಲ್ಲದೆ ಗ್ರಾಮಸ್ಥರು ಭಿಕ್ಷೆ ಬೇಡಿ ಊಟ ಹಾಕ್ತಿದ್ದಾರೆ. ಇದೊಂದು ಯೋಗ್ಯತೆಯಿಲ್ಲದ ಸರಕಾರ“ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು, “ರಾಜ್ಯ ಸರಕಾರ ಕಣ್ಣಲ್ಲಿ ರಕ್ತ ಇಲ್ಲದ ಸರಕಾರ. ಹೆಣ್ಣುಮಕ್ಕಳು, ವೃದ್ಧರು, ಮಕ್ಕಳು, ಅಂಗವಿಕಲರು ಯಾರಿಗೂ ಒಳಿತನ್ನು ಮಾಡದ ಈ ಸರಕಾರ ಜನವಿರೋಧಿ ನೀತಿಗಳಿಂದಾಗಿ ಜನರಿಂದ ದೂರವಾಗುತ್ತಿದೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ ಆದರೆ ರಾಜ್ಯ ಸರಕಾರದ ವಿಪರೀತ ಓಲೈಕೆಯಿಂದಾಗಿ ಹಿಂದುಗಳಿಗೆ ಅನ್ಯಾಯವಾಗುತ್ತಿದೆ. ರೈತರಿಗೆ ಹಣ ಕೊಡಲು ಹಾಲಿಗೆ ಬೆಲೆ ಏರಿಕೆ ಮಾಡಿದ್ದಾರೆ ಆದರೆ ಅದು ರೈತರಿಗೆ ಹೋಗಿಲ್ಲ. ರೈತರ ವಿದ್ಯುತ್ ದರ, ಮೇವಿನ ಬೆಲೆ ವಿಪರೀತ ಏರಿಸಿದ್ದಾರೆ. ಇದೆಲ್ಲಿಯ ನ್ಯಾಯ? ರಾಜ್ಯ ಸರಕಾರವನ್ನು ಮುಂದಿನ ದಿನಗಳಲ್ಲಿ ಕಿತ್ತೆಸೆಯದಿದ್ದರೆ ರಾಜ್ಯದ ಜನರಿಗೆ ಉಳಿಗಾಲವಿಲ್ಲ” ಎಂದರು.

ಜಿಲ್ಲಾ ಸಂಸದ ಕ್ಯಾ.ಬೃಜೇಶ್ ಚೌಟ ಮಾತಾಡಿ, “ನಾಚಿಕೆ ಮಾನ ಮರ್ಯಾದೆ ಮೂರನ್ನು ಬಿಟ್ಟ ಕಾಂಗ್ರೆಸ್ ಸರಕಾರವನ್ನು ಕೆಳಗಿಳಿಸಿ 2028ರಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು” ಎಂದರು.
ವೇದಿಕೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕೋಲಾರ ಮಾಜಿ ಸಂಸದ ಮುನಿಸ್ವಾಮಿ, ಅಶ್ವಿನಿ ಗೌಡ. ಸಿಮೆಂಟ್ ಮಂಜು, ಅರುಣ್ ಕುಮಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರೇಮಾನಂದ ಶೆಟ್ಟಿ, ಪೂಜಾ ಪೈ, ತಿಲಕ್ ರಾಜ್ ಕೃಷ್ಣಾಪುರ, ರಾಜೇಶ್ ಕೊಟ್ಟಾರಿ, ಯತೀಶ್ ಅರುವ, ಅಲ್ಪಸಂಖ್ಯಾತ ಮೋರ್ಚಾದ ಶಾನವಾಜ್ ಮತ್ತಿತರರು ಉಪಸ್ಥಿತರಿದ್ದರು.
