ಅ.10: ಮಂಗಳೂರಿನಲ್ಲಿ ಕಾರಂತ ಹುಟ್ಟುಹಬ್ಬ, ಹಿರಿಯ ಸಾಹಿತಿ ವೈದೇಹಿ ಅವರಿಗೆ ಕಾರಂತ ಪ್ರಶಸ್ತಿ ಪ್ರದಾನ

ಮಂಗಳೂರು: ಕಡಲ ತೀರದ ಭಾರ್ಗವ, ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ 123ನೇ ಹುಟ್ಟು ಹಬ್ಬದ ಸಲುವಾಗಿ ಕಲ್ಕೂರ ಪ್ರತಿಷ್ಠಾನದಿಂದ ನೀಡಲಾಗುವ “ಕಾರಂತ ಪ್ರಶಸ್ತಿ -2026″ನ್ನು ಹಿರಿಯ ಮಹಿಳಾ ಸಾಹಿತಿ, ಕಾಂದಬರಿಗಾರ್ತಿ ವೈದೇಹಿಯವರಿಗೆ ಪ್ರದಾನ ಮಾಡಲಾಗುವುದು ಎಂದು ಕಾರಂತ ಸಮಿತಿಯ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 10 ಶನಿವಾರ ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಪತ್ತುಮುಡಿ ಸೌಧದ ಸಭಾಂಗಣದಲ್ಲಿ ದಿವಂಗತ ಪತ್ತುಮುಡಿ ಸೂರ್ಯನಾರಾಯಣ ರಾವ್ ಸಂಸ್ಮರಣೆಯೊಂದಿಗೆ ಜರಗಲಿರುವುದು. ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೊ| ಬಿ.ಎ. ವಿವೇಕ ರೈ ಕಾರಂತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರಂತ ಸಂಸ್ಮರಣೆ ಗೈಯ್ಯಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ| ಪಿ.ಎಲ್. ಧರ್ಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಿರುವರು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಹಿರಿಯ ಸಾಹಿತಿಗಳಾದ ಶ್ರೀಮತಿ ಭುವನೇಶ್ವರಿ ಹೆಗ್ಡೆ ಬಹುಮಾನ ವಿತರಿಸಲಲಿದ್ದು, ಅಂಚೆಕಾರ್ಡಿನಲ್ಲಿ ಕಾರಂತರ ಚಿತ್ರರಚನಾ ಸ್ಪರ್ಧೆಯ ವಿಜೇತರಿಗೆ ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಎಸ್. ಭಟ್, ಬಹುಮಾನ ವಿತರಿಸುವರು.

ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ಪ್ರಧಾನ ಅಭ್ಯಾಗತರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ। ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ತು ಸದಸ್ಯರಾದ ಐವನ್ ಡಿಸೋಜ ಭಾಗವಹಿಸಲಿದ್ದು, ಅಭ್ಯಾಗತರಾಗಿ ಕರಾವಳಿ ಲೇಖಕಿಯರ ಸಂಘದ ಅಧ್ಯಕ್ಷರಾದ ಶಕುಂತಳಾ ಟಿ. ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜಾಧ್ಯಕ್ಷ ಡಾ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯ ಸಮೂಹದ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಕಾಪಿಕಾಡ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್., ಹಿರಿಯ ಸಾಹಿತಿ ಹೆಚ್. ಶಾಂತರಾಜ ಐತಾಳ್, ತುಳು ಒಕ್ಕೂಟದ ಅಧ್ಯಕ್ಷರಾದ ಎ.ಸಿ. ಭಂಡಾರಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಎಂ.ಪಿ. ಶ್ರೀನಾಥ್ ಮತ್ತಿತರರು ಭಾಗವಹಿಸಲಿರುವರು.

ಸಾಹಿತಿ ವೈದೇಹಿ ಅವರ ಪರಿಚಯ:
‘ವೈದೇಹಿ’ ಎಂಬ ಕಾವ್ಯನಾಮದಿಂದ ಖ್ಯಾತರಾಗಿರುವ ಕನ್ನಡ ಸಾರಸ್ವತ ಲೋಕದ ಹಿರಿಯ ಲೇಖಕಿ, ಕಾದಂಬರಿಗಾರ್ತಿ ಜಾನಕಿ ಶ್ರೀನಿವಾಸಮೂರ್ತಿ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ‘ವಾಸಂತಿ’ ಎನ್ನುವುದು ಇವರ ಮೂಲ ಹೆಸರು. ವಿವಾಹದ ಬಳಿಕ ಜಾನಕಿ ಎಂಬ ನಾಮಕರಣವಾಯಿತು. ‘ನೀರೆಯರ ಮನ’ ಎಂಬ ಲೇಖನವನ್ನು ಪ್ರಕಟಿಸುವಾಗ ‘ವೈದೇಹಿ’ ಎಂಬ ಕಾವ್ಯನಾಮವನ್ನು ರೂಢಿಸಿಕೊಂಡರು.
ನಾಡಿನ ಪ್ರಸಿದ್ಧ ಪತ್ರಿಕೆಗಳಾದ ಕರ್ಮವೀರ, ಮಯೂರ, ಸುಧಾ, ಪ್ರಜಾವಾಣಿ, ಉದಯವಾಣಿ, ಕಸ್ತೂರಿ, ಸಾಕ್ಷಿ ಸಂಕ್ರಮಣ, ಗೆಳತಿ ಮುಂತಾದವುಗಳಲ್ಲಿ ಇವರು ಬರೆದಿರುವ ಕಥೆಗಳು, ಲೇಖನಗಳು ಪ್ರಕಟಗೊಂಡಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಂ.ಕೆ. ಇಂದಿರಾ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಹಿತ ಅನೇಕಾನೇಕ ಪ್ರಶಸ್ತಿಗಳನ್ನು ಪಡೆದಿರುವ ವೈದೇಹಿಯವರು “ಕಥಾ ಸಂಕಲನಗಳು’, ಕವನ ಸಂಗ್ರಹಗಳು, ಮಕ್ಕಳ ಸಾಹಿತ್ಯ, ಪ್ರಬಂಧಗಳು ಅನುವಾದ ಸಾಹಿತ್ಯ, ಕಾದಂಬರಿಗಳನ್ನು ಬರೆದಿರುವರು.

Advt

ಅಕ್ಟೋಬರ್ 10 ಶನಿವಾರದಂದು ಬೆಳಿಗ್ಗೆ 9.30ರಿಂದ ಸುಗಮ ಸಂಗೀತ ಝೇಂಕಾರ ಬಳಗ, ರಜನಿ ಮಲ್ಯ, ಅಧಿತಿ ಗಾಣಿಗ, ರೋಹಿತ್ ಉಪಾಧ್ಯಾಯ ಇವರಿಂದ 10ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ, ಕಾರಂತ ಸಂಸ್ಕರಣೆ, ಪ್ರಶಸ್ತಿ ಪ್ರದಾನ ಅಲ್ಲದೆ ಬಹುಮಾನ ವಿತರಣೆ ಸಾಧಕ ಬಂಧುಗಳಿಗೆ ಗೌರವಾರ್ಪಣೆ ನಡೆಯಲಿದ್ದು 12ಗಂಟೆಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿರುವುದು. ಕಾರಂತ ಅಭಿಮಾನಿಗಳು ಭಾಗವಹಿಸಬೇಕೆಂದು ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.

ಎಆರ್ ಸುಬ್ಬಯ್ಯಕಟ್ಟೆ, ಪೊಳಲಿ ನಿತ್ಯಾನಂದ ಕಾರಂತ್, ಜಿಕೆ ಭಟ್ ಸೇರಾಜೆ, ಜನಾರ್ಧನ ಹಂದೆ, ಪೂರ್ಣಿಮಾ ಪೇಜಾವರ, ವಿಜಯಲಕ್ಷ್ಮಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!