ಕರಾವಳಿ ಅಭಿವೃದ್ಧಿಗೆ ₹5,000 ಕೋಟಿ ವಿಶೇಷ ಪ್ಯಾಕೇಜ್‌ ಸೇರಿ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಮಂಜುನಾಥ್ ಭಂಡಾರಿ ಮನವಿ

ಬೆಂಗಳೂರು: ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ, ಕರಾವಳಿ ಭಾಗದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಮನವಿ ಪತ್ರ ಸಲ್ಲಿಸಿದ್ದಾರೆ.

ಕರಾವಳಿ ಜಿಲ್ಲೆಗಳ ಆರ್ಥಿಕತೆ, ಮೀನುಗಾರಿಕೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ ಮತ್ತು ಸಂಸ್ಕೃತಿಯ ರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ₹5,000 ಕೋಟಿ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸುವಂತೆ ಅವರು ಕೋರಿದ್ದಾರೆ. ಶಾಸಕರ ಮನವಿಗೆ ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಪತ್ರದಲ್ಲಿನ ಪ್ರಮುಖ ಅಂಶಗಳನ್ನು ಪರಿಶೀಲಿಸಿ ಸಂಪುಟ ಅಜೆಂಡಾದಲ್ಲಿ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸ್ಪಷ್ಟ ಆದೇಶ ನೀಡಿದ್ದಾರೆ.

ಈ ಮುಂಬರುವ ಸಚಿವ ಸಂಪುಟ ಸಭೆಯು ಕರಾವಳಿಯ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ವೇದಿಕೆಯಾಗಿದೆ ಎಂದು ತಿಳಿಸಿರುವ ಮಂಜುನಾಥ್ ಭಂಡಾರಿ ಅವರು, ಯುವಜನರಿಗೆ ಸ್ಥಳೀಯ ಉದ್ಯೋಗ ಒದಗಿಸುವ ಸುಧಾರಿತ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಹಾಗೂ ರೈತರು-ಮೀನುಗಾರರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳಿಗೆ ತಕ್ಷಣವೇ ಆಡಳಿತಾತ್ಮಕ ಅನುಮೋದನೆ ಮತ್ತು ಅಗತ್ಯ ಅನುದಾನ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಶಿಕ್ಷಣ, ಕ್ರೀಡೆ ಮತ್ತು ತಂತ್ರಜ್ಞಾನ ಕ್ಷೇತ್ರದ ನೂತನ ಯೋಜನೆಗಳು:

ಕರಾವಳಿ ಭಾಗದ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದ ಪ್ರಗತಿಗಾಗಿ ಪತ್ರದಲ್ಲಿ ಹಲವು ಪ್ರಮುಖ ಪ್ರಸ್ತಾವನೆಗಳನ್ನು ಇಡಲಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ಕೃಷಿ/ತೋಟಗಾರಿಕೆ ಡಿಪ್ಲೋಮಾ ಕಾಲೇಜನ್ನು ‘ಕೃಷಿ ವಿಶ್ವವಿದ್ಯಾಲಯ’ವಾಗಿ ಮೇಲ್ದರ್ಜೆಗೇರಿಸಲು ಮನವಿ ಮಾಡಲಾಗಿದೆ. ಬ್ರಹ್ಮಾವರದಲ್ಲಿ ಲಭ್ಯವಿರುವ 342 ಎಕರೆ ಭೂಮಿ ಹಾಗೂ ₹20 ಕೋಟಿ ಮೌಲ್ಯದ ಮೂಲಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಂಡು, ಹೆಚ್ಚುವರಿಯಾಗಿ ₹10 ಕೋಟಿ ಅನುದಾನ ಮತ್ತು ಗುತ್ತಿಗೆ ಆಧಾರದ ಮೇಲೆ 10 ಬೋಧಕ ಸಿಬ್ಬಂದಿಗಳನ್ನು ನೇಮಿಸಿ ಪದವಿ ಮಹಾವಿದ್ಯಾಲಯ ಆರಂಭಿಸಲು ಕೋರಲಾಗಿದೆ. ಪ್ರಸ್ತುತ ಬ್ರಹ್ಮಾವರದಲ್ಲಾಗುತ್ತಿರುವ ಡಿಪ್ಲೋಮಾ ಕೋರ್ಸ್‌ಗಳನ್ನು ದಾವಣಗೆರೆ ಜಿಲ್ಲೆಯ ಕತ್ತಲಗೆರೆ ಕ್ಯಾಂಪಸ್‌ಗೆ ಸ್ಥಳಾಂತರಿಸಿ ಎರಡೂ ಕಡೆ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ.

ಉಡುಪಿ ಜಿಲ್ಲೆಯ ಬೆಳಪು ಗ್ರಾಮದಲ್ಲಿ ಉನ್ನತ ಶಿಕ್ಷಣ ಇಲಾಖೆ, ವಿಟಿಯು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಹಾಗೂ ಸಿಎಸ್‌ಆರ್ (CSR) ನಿಧಿಯ ನೆರವಿನೊಂದಿಗೆ ನೂತನ ‘ಭಾರತ್ ಜೋಡೋ ಕ್ರೀಡಾ ವಿಶ್ವವಿದ್ಯಾಲಯ’ವನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ, ಉಡುಪಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರೂಪಿಸಿರುವ ₹7 ಕೋಟಿ ವೆಚ್ಚದ ‘ದಿ. ಆಸ್ಕರ್ ಫೆರ್ನಾಂಡಿಸ್ ಕಬಡ್ಡಿ ಕ್ರೀಡಾಂಗಣ’ದ ನಕ್ಷೆ ಮತ್ತು ಯೋಜನೆಗೆ ಸಂಪುಟದಲ್ಲಿ ಅನುಮೋದನೆ ನೀಡಲು ಕೋರಲಾಗಿದೆ. ಹಾಗೆಯೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕ್ರೀಡಾಪಟುಗಳ ಅನುಕೂಲಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಟ್ಟು ಕ್ರೀಡಾಂಗಣಗಳ ಸಮಗ್ರ ಅಭಿವೃದ್ಧಿ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವಂತೆ ಕೇಳಿಕೊಳ್ಳಲಾಗಿದೆ.

ತರಬೇತಿ ಮತ್ತು ಮೂಲಸೌಕರ್ಯ ವಿಭಾಗದಲ್ಲಿ, ಕರಾವಳಿಯ 25 ಎಂಜಿನಿಯರಿಂಗ್, ಪಾಲಿಟೆಕ್ನಿಕ್, ಐಟಿಐ ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜುಗಳ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ಸ್ಥಳೀಯ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶ ಒದಗಿಸಲು ಮಂಗಳೂರಿನಲ್ಲಿ ಉದ್ಯಮಾಧಾರಿತ ಪ್ರಾಯೋಗಿಕ ತರಬೇತಿಯ ‘ಸುಧಾರಿತ ಕೌಶಲ್ಯಾಭಿವೃದ್ಧಿ ಕೇಂದ್ರ’ ಸ್ಥಾಪನೆಗೆ ಒತ್ತಾಯಿಸಲಾಗಿದೆ.

ಮೀನುಗಾರಿಕೆ ಕ್ಷೇತ್ರ ಮತ್ತು ಕರಾವಳಿ ತೀರದ ಅಭಿವೃದ್ಧಿ:

ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಮಂಗಳೂರು ಮೀನುಗಾರಿಕೆ ಕಾಲೇಜನ್ನು ಪ್ರತ್ಯೇಕ ‘ಮೀನುಗಾರಿಕಾ ವಿಶ್ವವಿದ್ಯಾಲಯ’ವಾಗಿ ಮೇಲ್ದರ್ಜೆಗೇರಿಸಿ, ಜಲಕೃಷಿ, ಸಾಗರ ವಿಜ್ಞಾನ, ಮೀನು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅವಕಾಶ ಕಲ್ಪಿಸಲು ಮನವಿ ಮಾಡಲಾಗಿದೆ. ಜೊತೆಗೆ, ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಸಮಸ್ಯೆಗಳ ಪರಿಹಾರ ಹಾಗೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಪ್ರತ್ಯೇಕ ‘ಕರ್ನಾಟಕ ಮೀನುಗಾರಿಕಾ ಪರಿಷತ್ತು’ ಸ್ಥಾಪಿಸುವುದು ಮತ್ತು ಜಲಕೃಷಿ, ಮೀನು ಸಾಕಾಣಿಕೆ, ಮಾರುಕಟ್ಟೆ ಉತ್ತೇಜನಕ್ಕಾಗಿ ಮಂಗಳೂರಿನಲ್ಲಿ ಆಧುನಿಕ ಅಕ್ವಾಪಾರ್ಕ್ ಸ್ಥಾಪಿಸಲು ಕೋರಲಾಗಿದೆ.

ಮೀನುಗಾರರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತೆ, ಮೀನುಗಾರಿಕೆ ವೇಳೆ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ₹5 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸುವುದು, ಬೋಟ್‌ಗಳ ಡೀಸೆಲ್ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿ ಇಂಧನ ದರ ಏರಿಕೆಯ ಹೊರೆಯನ್ನು ತಗ್ಗಿಸುವುದು ಹಾಗೂ ಪ್ರಮುಖ ಮೀನುಗಾರಿಕಾ ಕೇಂದ್ರಗಳಲ್ಲಿ ಆಧುನಿಕ ಕೋಲ್ಡ್ ಸ್ಟೋರೇಜ್ ಮತ್ತು ಶೀತಲೀಕರಣ ಘಟಕಗಳನ್ನು ನಿರ್ಮಿಸಲು ಪತ್ರದಲ್ಲಿ ವಿನಂತಿಸಲಾಗಿದೆ. ಇವುಗಳ ಜೊತೆಗೆ, ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ಮತ್ತು ಅಗತ್ಯ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಕರಾವಳಿ ಸವೆತ ತಡೆಯಲು ಕ್ರಮ ವಹಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಪಿಲಿಕುಳ ಅಭಿವೃದ್ಧಿ:

ಧಾರ್ಮಿಕ ಮತ್ತು ನೈಸರ್ಗಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕಾರವಾರದ ಗೋಕರ್ಣ, ಮುರುಡೇಶ್ವರ; ಉಡುಪಿಯ ಕೊಲ್ಲೂರು ಮೂಕಾಂಬಿಕಾ, ಶ್ರೀ ಕೃಷ್ಣ ಮಠ; ಚಿಕ್ಕಮಗಳೂರಿನ ಶೃಂಗೇರಿ, ಹೊರನಾಡು; ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹಾಗೂ ಮಂಗಳಾದೇವಿ ದೇವಾಲಯಗಳನ್ನು ಬೆಸೆಯುವ ‘ಕರಾವಳಿ ಟೆಂಪಲ್ ಟೂರಿಸಂ’ ಕಾರಿಡಾರ್ ಅಭಿವೃದ್ಧಿಪಡಿಸಲು ಕೋರಲಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ಮಂಗಳೂರಿನ ತಲಪಾಡಿಯಿಂದ ಉಡುಪಿಯ ಬೈಂದೂರಿನವರೆಗೆ ಸಮುದ್ರ ತೀರಕ್ಕೆ ಸಮಾನಾಂತರವಾಗಿ ಸುಸಜ್ಜಿತ ರಸ್ತೆ ನಿರ್ಮಿಸಲು ಹಾಗೂ ಸಮುದ್ರ ತೀರದಲ್ಲಿ 150 ಎಕರೆ ಜಾಗವನ್ನು ಪ್ರವಾಸೋದ್ಯಮ ವಲಯವೆಂದು ಗುರುತಿಸಿ, ಕೇರಳದ ಬೇಕಲ್ ಮಾದರಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಹೋಟೆಲ್‌ಗಳನ್ನು ಸ್ಥಾಪಿಸಲು ಖಾಸಗಿ ಹೂಡಿಕೆಗೆ ಪ್ರೋತ್ಸಾಹ ನೀಡಲು ಮನವಿ ಮಾಡಲಾಗಿದೆ. ಅಂತೆಯೇ, ರಾಷ್ಟ್ರೀಯ-ಅಂತರರಾಷ್ಟ್ರೀಯ ಸಮಾವೇಶಗಳಿಗೆ ಮಂಗಳೂರಿನಲ್ಲಿ ಕನ್ವೆನ್ಷನ್ ಸೆಂಟರ್ ಹಾಗೂ ಸಾರ್ವಜನಿಕರಿಗಾಗಿ ಮಕ್ಕಳ ಪಾರ್ಕ್‌ಗಳನ್ನು ನಿರ್ಮಿಸುವಂತೆ ಕೋರಲಾಗಿದೆ.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಗುತ್ತಿಗೆ ನೀಡಲಾಗಿರುವ 356 ಎಕರೆ ಜಮೀನನ್ನು ನೋಡಲ್ ಇಲಾಖೆಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಮಂಜೂರು ಮಾಡುವುದು, ಪ್ರಾಧಿಕಾರವನ್ನು ಮಂಡಳಿಯನ್ನಾಗಿ ಪರಿವರ್ತಿಸಿ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ನೇಮಿಸುವುದು ಹಾಗೂ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವ ‘ಅರ್ಬನ್ ಇಕೋ ಪಾರ್ಕ್’ ಯೋಜನೆಗೆ ಬಾಕಿ ಉಳಿದ ₹12.60 ಕೋಟಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಲು ವಿನಂತಿಸಲಾಗಿದೆ.

ಕರಾವಳಿಯ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ಯಕ್ಷಗಾನ, ಬಯಲಾಟ, ಪಾರಂಪರಿಕ ಹಾಗೂ ಆಧುನಿಕ ಕಂಬಳಗಳು ಮತ್ತು ಕೊರಗ, ಮರಾಟಿ ನಾಯ್ಕ, ಕುಡುಬಿ ಸಮುದಾಯಗಳ ಗುಮಟೆ ಕುಣಿತ, ಗೋಂದೋಳು, ಕೋಲಾಟ ಮುಂತಾದ ಜನಪದ ಕಲೆಗಳ ಸಂರಕ್ಷಣೆಗಾಗಿ ವಾರ್ಷಿಕ ಕನಿಷ್ಠ ₹10 ಕೋಟಿ ವಿಶೇಷ ಅನುದಾನ ಒದಗಿಸುವಂತೆ ಮಂಜುನಾಥ್ ಭಂಡಾರಿ ಅವರು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

Advt
error: Content is protected !!