
ಮಂಗಳೂರು: ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಲೋಬೋ ಫೌಂಡೇಶನ್ (ರಿ) ಜಂಟಿ ಆಶ್ರಯದಲ್ಲಿ “ಬಾಲಿಕಾ ಜಾಗೃತಿ ಅಭಿಯಾನ-2026” ಸಮಾರೋಪ ಸಮಾರಂಭ ಕುಂಜತ್ತಬೈಲ್ ನ ನೋಬೆಲ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಒಂದು ತಿಂಗಳ ಕಾಲ ಮಂಗಳೂರಿನ ವಿವಿಧ ಭಾಗದ ಶಾಲೆಗಳಲ್ಲಿ ಆಯೋಜಿಸಿದ ಬಾಲಿಕಾ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಮಂಗಳೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಬಾಲಿಕಾ ಜಾಗೃತಿ ಅಭಿಯಾನವು ನಮ್ಮ ಹೆಣ್ಣುಮಕ್ಕಳಿಗೆ ಕಾನೂನು ಅರಿವು, ಆರೋಗ್ಯ ಜಾಗೃತಿ ಮತ್ತು ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ಸಮಾಜದಲ್ಲಿ ಧೈರ್ಯದಿಂದ ಮುನ್ನಡೆಯಲು ಪ್ರೇರೇಪಿಸುವ ಒಂದು ಶ್ರೇಷ್ಠ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಶಿಶು ಮತ್ತು ಮಹಿಳಾ ಯೋಜನಾಧಿಕಾರಿ ಶ್ವೇತಾ.ಎನ್ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯು ಸದಾಕಾಲ ಹೆಣ್ಣುಮಕ್ಕಳ ರಕ್ಷಣೆ, ಹಕ್ಕುಗಳು ಮತ್ತು ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಇಂದಿನ ಹೆಣ್ಣುಮಕ್ಕಳು ನಾಳಿನ ಬಲಿಷ್ಠ ಸಮಾಜದ ನಿರ್ಮಾತೃಗಳು. ಆದರೆ ಇಂದಿಗೂ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಇಂತಹ ಜಾಗೃತಿ ಅಭಿಯಾನಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.

ಕುಂಜತ್ತಬೈಲ್ ನೋಬೆಲ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಅಧಿಕಾರಿ ಮೊಹಮ್ಮದ್ ಶಾರಿಕ್.ಎಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಮನಪಾ ನಿಕಟಪೂರ್ವ ಕಾರ್ಪೊರೇಟರ್ ಶರತ್ ಕುಮಾರ್,ನೋಬೆಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಲತಾ ಪ್ರಸಾದ್ ಶೆಟ್ಟಿ,ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷೆ ಡಾ ಸಂಸದ್ ಕುಂಜತ್ತಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಂದು ತಿಂಗಳಲು ಕಾಲ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ ದ.ಕ ಬಾಲನ್ಯಾಯ ಸದಸ್ಯೆ ಸಚಿತ ನಂದಗೋಪಾಲ್,ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ.ಸಂಸ್ಕೃತಿ ಶೆಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಮಾನಸ ಹೆಗ್ಡೆ,ಮನೋರೋಗ ತಜ್ಞೆ ಹರ್ಷಿತ ಎಮ್.ವಿ ಅವರನ್ನು ಸನ್ಮಾನಿಸಲಾಯಿತು.

ಪ್ರಚಲಿತ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಹನಿಷ ಸವಾದ್ ಸ್ವಾಗತಿಸಿದರು. ಟ್ರಸ್ಟಿ ಕವಿತಾ ಶ್ರೀರಾಮ್ ವಂದಿಸಿದರು. ಸುರೇಖ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
