
ಮಂಗಳೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ಅಸಭ್ಯವಾಗಿ ವರ್ತಿಸಿದ ಖಾಸಗಿ ಬಸ್ ಕಂಡಕ್ಟರ್ ನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಲ್ಲೇರಿ ನಿವಾಸಿ, ಪ್ರಸ್ತುತ ಉಪ್ಪಿನಂಗಡಿಯ ಕರ್ವೇಲು ಎಂಬಲ್ಲಿ ಅಬುಬಕರ್ ಅವರ ಬಾಡಿಗೆ ಮನೆಯಲ್ಲಿ ವಾಸವಿರುವ ಅಬುಸಾಲಿ ಎಂಬುವವರ ಪುತ್ರ ಇರ್ಫಾನ್ (32) ಬಂಧಿತ ಆರೋಪಿ. ಈತ ಮಂಗಳೂರು-ವಿಟ್ಲ ಮಾರ್ಗದಲ್ಲಿ ಸಂಚರಿಸುವ ‘ಸೆಲೆನ’ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಜುಲೈ 9ರಂದು ಸಂಜೆ ಸುಮಾರು 5:00 ಗಂಟೆಯ ವೇಳೆಗೆ ಸೆಲೆನ ಬಸ್ ಮಂಗಳೂರಿನಿಂದ ಹೊರಟಿದ್ದ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಇರ್ಫಾನ್ ವಿಕೃತವಾಗಿ ವರ್ತಿಸಿದ್ದಾನೆ. ವಿದ್ಯಾರ್ಥಿನಿಯರ ಎದುರೇ ತನ್ನ ಗುಪ್ತಾಂಗ ಪ್ರದರ್ಶನ ಮಾಡಿ ಅಸಭ್ಯ ಸನ್ನೆಗಳನ್ನು ಮಾಡಿದ್ದಲ್ಲದೆ, ಬಸ್ಸಿನ ಹಿಂಬದಿಯ ಸೀಟಿಗೆ ಬರುವಂತೆ ಸನ್ನೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಆರೋಪಿಯ ಈ ವಿಕೃತ ಚೇಷ್ಟೆಯಿಂದ ಕಂಗೆಟ್ಟ ವಿದ್ಯಾರ್ಥಿನಿಯರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜುಲೈ 10ರಂದು ಆರೋಪಿತ ಕಂಡಕ್ಟರ್ ಇರ್ಫಾನ್‌ನನ್ನು ದಸ್ತಗಿರಿ ಮಾಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
