
ಮಂಗಳೂರು: ಮಹಾರಾಷ್ಟ್ರದಿಂದ ಕೇರಳಕ್ಕೆ ಮರಳುತ್ತಿದ್ದ ಉದ್ಯಮಿಯ ಕುಟುಂಬವನ್ನು ಬೈಕಂಪಾಡಿಯಲ್ಲಿ ಅಡ್ಡಗಟ್ಟಿ 180 ಗ್ರಾಂ ಚಿನ್ನ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ನಗರ ಪೊಲೀಸರು ಕೇರಳ ಮತ್ತು ಕೊಡಗಿನಲ್ಲಿ ಬಂಧಿಸಿದ್ದಾರೆ.
ಕೇರಳದ ಕಣ್ಣೂರು ತಲಶ್ಶೇರಿ ನಿವಾಸಿ ನಿಮಿಲ್ ಆರ್.ಕೆ (37), ಮಡಿಕೇರಿ ತಾಲ್ಲೂಕು ಹಕ್ಕತ್ತೂರು ತೊಬ್ಬೊಟ್ಟು ಮನೆಯ ಇರ್ಷಾದ್ (40) ಮತ್ತು ಮಡಿಕೇರಿ ಮಾರ್ಕೆಟ್ ಬಳಿಯ ನಿವಾಸಿ ಮುಸ್ತಾಫ (39) ಬಂಧಿತರು.
ಪಯ್ಯನ್ನೂರು ನಿವಾಸಿ ವಿಕಾಸ್ ಸುಬ್ಬರಾವ್ ಧನವಡೆ ಅವರು ಪತ್ನಿ ಮತ್ತು ಮಗನೊಂದಿಗೆ ಡಿಸೈರ್ ಕಾರಿನಲ್ಲಿ ಬರುತ್ತಿದ್ದಾಗ ಜೂ 29ರಂದು ನಸುಕಿನ 2.45ಕ್ಕೆ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಕಾರುಗಳಲ್ಲಿ ಬಂದ ಏಳು ಮಂದಿ ಮುಸುಕುಧಾರಿಗಳು ಕಾರನ್ನು ಅಡ್ಟಗಟ್ಟಿ ವಿಕಾಸ್ ಅವರನ್ನು ಹೊರಗೆಳೆದು ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಣ ಮಾಡಿದ್ದರು.

ಕೆಲವು ಕಿಲೊಮೀಟರ್ ದೂರ ಸಾಗಿದ ನಂತರ ಅವರಿಬ್ಬರನ್ನು ಇಳಿಸಿ ಚಿನ್ನ, 2 ಮೊಬೈಲ್ ಫೋನ್ ಮತ್ತು ₹ 3 ಲಕ್ಷ ನಗದಿನೊಂದಿಗೆ ಮುಂದೆ ಸಾಗಿದ್ದರು. ಕಾರು ಮರುದಿನ ಬಂಟ್ವಾಳ ತಾಲ್ಲೂಕು ಪಚ್ಚಿನಡ್ಕದಲ್ಲಿ ಪತ್ತೆಯಾಗಿತ್ತು.
