
ಸುರತ್ಕಲ್: ಕೇರಳ ಮೂಲದ ಉದ್ಯಮಿಯ ಕಾರನ್ನು ಅಡ್ಡಗಟ್ಟಿದ ತಂಡವೊಂದು ಕಾರ್ ಸಮೇತ ಚಿನ್ನಾಭರಣ ದರೋಡೆಗೈದ ಘಟನೆ ಇಂದು ನಸುಕಿನ ಜಾವ ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿ ಬಳಿ ನಡೆದಿದೆ.
ಘಟನೆಯ ವಿವರ:
ಕೇರಳದ ಪಯ್ಯನ್ನೂರು ನಿವಾಸಿ ವಿಕಾಸ್ ಎಂಬವರು ತನ್ನ ಪತ್ನಿ ಮತ್ತು ಮಗನೊಂದಿಗೆ ಮುಂಬೈಗೆ ತನ್ನ ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮ ನಿಮಿತ್ತ ತೆರಳಿದ್ದು ನಸುಕಿನ 2:30ರ ಸುಮಾರಿಗೆ ಹಿಂದಿರುಗುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಬಳಿಯ ದ್ವಾರ ಹೋಟೆಲ್ ಬಳಿ ತಲುಪುತ್ತಿದ್ದಂತೆ ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 7-8 ಮಂದಿಯಿದ್ದ ತಂಡ ವಿಕಾಸ್ ಅವರನ್ನು ಕಾರಿನಿಂದ ಕೆಳಕ್ಕಿಲಿಸಿ ಪತ್ನಿ ಮತ್ತು ಮಗನ ಸಮೇತ ಕಾರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

ನಂತರ ಪಣಂಬೂರು ಬೀಚ್ ರಸ್ತೆ ಬಳಿ ವಿಕಾಸ್ ಅವರ ಪತ್ನಿ ಮತ್ತು ಮಗನ ಬಳಿಯಿದ್ದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಹಾಗೂ ಕಾರನ್ನು ದೋಚಿ ಸಂತ್ರಸ್ತರನ್ನು ರಸ್ತೆಯಲ್ಲೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ವಿಕಾಸ್ ಅವರು ಪಣಂಬೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.