ನಾಡಿದ್ದು ಮಗಳ ಮದುವೆ, ಅಷ್ಟರಲ್ಲೇ ಮಗಳ ಸಮೇತ ಸಾವಿನ ದಾರಿ ಹಿಡಿದ ಹೆತ್ತವರು! ಯುವಕನ ಕಿರುಕುಳಕ್ಕೆ ಬಲಿಯಾಯ್ತು ಕುಟುಂಬ!!

ಮೈಸೂರು: ಮಗಳ ಹಿಂದೆ ಬಿದ್ದು ಯುವಕನೊಬ್ಬ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತ ಹೆತ್ತವರು ಮಗಳ ಸಮೇತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ವರುಣಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೆಂಪಯ್ಯನ ಹುಂಡಿಯಲ್ಲಿ ಇಂದು ನಡೆದಿದೆ. ಮಗಳಿಗೆ ಮದುವೆ ನಿಶ್ಚಯವಾಗಿದ್ದು ನಾಡಿದ್ದು ಬುಧವಾರ ಮದುವೆ ನಡೆಯಬೇಕಿತ್ತು. ಆದರೆ ಅಷ್ಟರಲ್ಲೇ ಕುಟುಂಬ ಮರ್ಯಾದೆಗೆ ಅಂಜಿ ಸಾವಿನ ದಾರಿ ಹಿಡಿದಿದ್ದು ಮದುವೆ ಮನೆಯಲ್ಲಿ ಶೋಕ ಆವರಿಸಿದೆ.
ಶಿವಣ್ಣ-ನಾಗರತ್ನ ಹಾಗೂ ಅವರ ಮಗಳು ರಕ್ಷಿತಾ ಆತ್ಮಹತ್ಯೆಗೆ ಶರಣಾದವರು. ಇದೇ ಗ್ರಾಮದ ಯುವಕ ಉಲ್ಲಾಸ್​ ಗೌಡ ಎಂಬಾತ ಮಾನಸಿಕವಾಗಿ ಈ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.
ರಕ್ಷಿತಾಳ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ರಕ್ಷಿತಾಳನ್ನು ಗ್ರಾಮದ ಉಲ್ಲಾಸ್ ಗೌಡ ಪ್ರೀತಿಸುತ್ತಿರುವುದಾಗಿ ಮದುವೆ ಆಗುತ್ತೇನೆ ಎಂದು ಕುಟುಂಬದವರಿಗೆ ಹೇಳಿದ್ದ. ಇದನ್ನು ರಕ್ಷಿತಾ, ಮತ್ತು ಆಕೆಯ ಅಪ್ಪ – ಅಮ್ಮ ವಿರೋಧಿಸಿದ್ದರು. ಅಲ್ಲದೆ ರಕ್ಷಿತಾಳಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ನಿಶ್ಚಿತಾರ್ಥ ಸಹ ಮಾಡಿದ್ದರು. ಜೂನ್​ 24ರಂದು ಮದುವೆಯನ್ನು ನಡೆಸಲು ನಿಶ್ಚಯಿಸಿ, ಸಕಲ ತಯಾರಿ ಮಾಡಿಕೊಂಡಿದ್ದರು. ಈ ಮಧ್ಯೆ ಉಲ್ಲಾಸ್​ ಗೌಡ ರಕ್ಷಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಗೆ ಮೆಸೇಜ್ ಮಾಡಿದ್ದ, ಅಲ್ಲದೆ ಈ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ರಕ್ಷಿತಾ ಮತ್ತು ಆಕೆಯ ತಂದೆ – ತಾಯಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!