
“योगेन चित्तस्य पदेन वाचां…” ಎಂಬ ಮಹರ್ಷಿ ಪತಂಜಲಿಯ ಸಂದೇಶದೊಂದಿಗೆ ಹಾಗೂ “ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ…” ಎಂಬ ಗೀತಾ ವಚನವನ್ನು ಸ್ಮರಿಸುತ್ತಾ, ಯೋಗವು ಕೇವಲ ವ್ಯಾಯಾಮವಲ್ಲದೆ ವ್ಯಕ್ತಿತ್ವ ವಿಕಾಸ, ಮಾನಸಿಕ ನೆಮ್ಮದಿ ಹಾಗೂ ಆಧ್ಯಾತ್ಮಿಕ ಚಿಂತನೆಗೆ ಮಾರ್ಗವಾಗಿದೆ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ಕೆನರಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಹಾಗೂ ತಂದೆಯಂದಿರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೃಪ್ತಿ ರೈ ಅವರು ಉಪಸ್ಥಿತರಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಕ್ಕಳೇ ನಿರ್ವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಶ್ರೀಮತಿ ಉಜ್ವಲ್ ಮಲ್ಯ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಪ್ರೋತ್ಸಾಹಿಸಿದರು.
ತಂದೆಯಂದಿರ ದಿನಾಚರಣೆಯ ಅಂಗವಾಗಿ ಮಕ್ಕಳು ತಮ್ಮ ತಂದೆಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡು, ಅವರಿಗೆ ಸಮರ್ಪಿತವಾದ ಹಾಡುಗಳನ್ನು ಹಾಡಿದರು. ಭಾವಪೂರ್ಣ ಕ್ಷಣಗಳಿಗೆ ಸಾಕ್ಷಿಯಾದ ಈ ಕಾರ್ಯಕ್ರಮದಲ್ಲಿ ಪೋಷಕರೊಂದಿಗೆ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ, ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಾ, ದೈನಂದಿನ ಒತ್ತಡಗಳಿಂದ ದೂರವಾಗಿ ನೆಮ್ಮದಿಯ ಅನುಭವ ಪಡೆದರು. ಈ ದಿನಾಚರಣೆಯು ಪೋಷಕರಿಗೆ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶವನ್ನು ಒದಗಿಸಿ, ಕುಟುಂಬ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ತರಬೇತುದಾರರಾದ ಶ್ರೀಮತಿ ಶ್ರುತಿ ಅವರು ಯೋಗದ ಮಹತ್ವವನ್ನು ತಿಳಿಸಿ, ಪೋಷಕರು ಹಾಗೂ ಮಕ್ಕಳೊಂದಿಗೆ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿಸಿದರು. ಯೋಗಾಭ್ಯಾಸವು ಎಲ್ಲರಿಗೂ ಉಲ್ಲಾಸ ಹಾಗೂ ಒತ್ತಡಮುಕ್ತ ಅನುಭವವನ್ನು ನೀಡಿತು.
“ಆರೋಗ್ಯಕ್ಕೆ ಯೋಗ, ಕುಟುಂಬಕ್ಕೆ ಪ್ರೀತಿ – ಸಂತಸದ ಬದುಕಿಗೆ ಇವೆರಡೂ ಅಗತ್ಯ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.