
ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಮೊಳಹಳ್ಳಿ ಶಿವರಾವ್ ಅವರ 146ನೇ ಜನ್ಮ ದಿನಾಚರಣೆ
ಮಂಗಳೂರು: ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ 146ನೇ ಜನ್ಮ ದಿನಾಚರಣೆ ಮಂಗಳವಾರ ಬೆಳಗ್ಗೆ ಬ್ಯಾಂಕ್ ಹಾಲ್ ನಲ್ಲಿ ಜರುಗಿತು.
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಮೊಳಹಳ್ಳಿ ಶಿವರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು, “ಮೊಳಹಳ್ಳಿ ಶಿವರಾವ್ ಅವರು ಸಹಕಾರಿ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಅವರು ತೋರಿಸಿಕೊಟ್ಟ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ. ಎಲ್ಲಾ ಸಹಕಾರಿಗಳ ಒಗ್ಗೂಡುವಿಕೆಯಿಂದಾಗಿ ಸಹಕಾರಿ ಕ್ಷೇತ್ರ ಬಲಿಷ್ಠವಾಗಿದೆ” ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಅರವಿಂದ ಚೊಕ್ಕಾಡಿ ರಚಿಸಿರುವ ಮೊಳಹಳ್ಳಿ ಶಿವರಾವ್ ಅವರ ಆಕರ ಗ್ರಂಥವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ, ಸಾಹಿತಿ ಅರವಿಂದ ಚೊಕ್ಕಾಡಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬ್ಯಾಂಕ್ ಎಂ.ಡಿ. ಗೋಪಿನಾಥ್ ಭಟ್, ಬ್ಯಾಂಕ್ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಳ್ಯೊಟ್ಟು ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.