
ಮಂಗಳೂರು: ಕೆನರಾ ನಂದಗೋಕುಲದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಅಕ್ಷತಾ ಅವರು ಸ್ವಾಗತಿಸಿ ಅಂತರರಾಷ್ಟ್ರೀಯ ಯೋಗ ದಿನದ ಮಹತ್ವವನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಉಜ್ವಲ್ ಮಲ್ಯರವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿದರು.
ಯೋಗ ತರಬೇತುದಾರರಾದ ಶ್ರೀಮತಿ ಶ್ರುತಿ ಅವರ ಮಾರ್ಗದರ್ಶನದಲ್ಲಿ ವಾರ್ಮ್-ಅಪ್ ವ್ಯಾಯಾಮಗಳು ಹಾಗೂ ವಿವಿಧ ಯೋಗಾಸನಗಳ ಪ್ರದರ್ಶನ ನಡೆಯಿತು. ಶ್ರೀಮತಿ ವಿದ್ಯಾ ಅವರು ಯೋಗದ ಮಹತ್ವದ ಕುರಿತು ಸಂಕ್ಷಿಪ್ತವಾಗಿ ಮಾತನಾಡಿ, “समत्वं योग उच्यते” ಎಂಬ ಭಗವದ್ಗೀತೆಯ ಸಂದೇಶವನ್ನು ಉಲ್ಲೇಖಿಸಿ, ಸುಖ-ದುಃಖ, ಜಯ-ಅಪಜಯಗಳಲ್ಲಿ ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳುವುದೇ ಯೋಗವೆಂದು ತಿಳಿಸಿದರು. ಜೀವನದ ಎಲ್ಲ ಸಂದರ್ಭಗಳಲ್ಲಿಯೂ ಶಾಂತಚಿತ್ತದಿಂದ ಹಾಗೂ ಸಮಭಾವದಿಂದ ವರ್ತಿಸುವ ಗುಣವೇ ನಿಜವಾದ ಯೋಗವಾಗಿದೆ ಎಂದು ಅವರು ಹೇಳಿದರು. ಗಾಯತ್ರಿ ಅವರು ವಂದನಾರ್ಪಣೆ ಸಲ್ಲಿಸಿದರು. ಅಂತಿಮವಾಗಿ ಮಕ್ಕಳ ಸಮೂಹ ಛಾಯಾಚಿತ್ರವನ್ನು ತೆಗೆಸಿಕೊಂಡು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.