
ಮಂಗಳೂರು: ಸಾಮಾನ್ಯವಾಗಿ ಕೋತಿ ಅಂದ ತಕ್ಷಣ ನಮ್ಮ ಕಣ್ಣಿಗೆ ಬೀಳುವುದು ಹಣ್ಣು, ತರಕಾರಿ ತಿನ್ನುವ ಸಸ್ಯಾಹಾರಿ ಜೀವಿ. ಆದರೆ ಈ ಮಣ್ಣಗುಡ್ಡೆಯ ಕಾಂತರಾಜ್ ಗಲ್ಲಿಯಲ್ಲಿ ಕಳೆದ ಎರಡು ವರ್ಷಗಳಿಂದ ಬೀಡುಬಿಟ್ಟಿರುವ ಆ ಒಂಟಿ ಸಲಗನ ಕಥೆಯೇ ಬೇರೆ.
ಅದಕ್ಕೆ ಕಾಡಿನ ಹಣ್ಣುಗಳಿಗಿಂತ ಮಂಗಳೂರಿನ ಮೀನು ಫ್ರೈ, ಕೋಳಿ ಮಾಂಸದ ರುಚಿ ಹತ್ತಿಬಿಟ್ಟಿದೆ!
ಹೌದು, ನೀವು ಕೇಳುತ್ತಿರುವುದು ಅಕ್ಷರಶಃ ನಿಜ. ಮನೆಗಳ ಅಡುಗೆ ಮನೆಯ ಘಮ ಘಮ ವಾಸನೆ ಹಿಡಿದು ನುಗ್ಗುವ ಈ ಖದೀಮ, ಮಾಂಸಾಹಾರದ ತಟ್ಟೆಯನ್ನೇ ಎಗರಿಸಿಕೊಂಡು ಹೋಗುತ್ತಿದ್ದಾನೆ. ಕೇವಲ ಮರಗಳ ಮೇಲೆ ಜಿಗಿಯುತ್ತಿದ್ದ ಆ ಮಂಗ, ಈಗ ನೇರವಾಗಿ ಬೆಡ್‌ರೂಂ, ಅಡುಗೆ ಮನೆಗಳ ಒಳಗೆ ದರ್ಬಾರ್ ನಡೆಸಲು ಶುರು ಮಾಡಿದ್ದಾನೆ.
ಬಬಿತಾಳ ಬೆನ್ನು ಬಿದ್ದ ಆ ಹನ್ನೆರಡು ಇಂಜೆಕ್ಷನ್‌ಗಳು!:
ಸ್ಥಳೀಯ ನಿವಾಸಿ ಬಬಿತಾ ಅವರ ಪಾಲಿಗೆ ಆ ದಿನ ಕರಾಳ ರಾತ್ರಿಯಂತೆ ಕಾಡಿತ್ತು. ಕೇವಲ ಎರಡು ತಿಂಗಳ ಹಿಂದೆ ಅವರು ಎಂದಿನಂತೆ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದರು. ಎಲ್ಲಿಂದಲೋ ಬಂದ ಆ ಒಂಟಿ ಕೋತಿ ಸದ್ದಿಲ್ಲದೆ ಏಕಾಏಕಿ ಅವರ ಮೇಲೆ ಎರಗಿಬಿಟ್ಟಿತು.
ಅದರ ಉಗುರು ಮತ್ತು ಹಲ್ಲುಗಳು ಬಬಿತಾಳ ಶರೀರವನ್ನು ಸೀಳಿದ್ದವು. ರಕ್ತದ ಮಡುವಿನಲ್ಲಿ ಬಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಕೊಟ್ಟಿದ್ದು ಸಣ್ಣಪುಟ್ಟ ಚಿಕಿತ್ಸೆಯಲ್ಲ… ಸತತ ಹನ್ನೆರಡು ಇಂಜೆಕ್ಷನ್‌ಗಳು! “ಎಷ್ಟೇ ಓಡಿಸಿದ್ರೂ ಅದು ಮತ್ತೆ ಬರುತ್ತೆ ಸರ್, ಒಮ್ಮೆ ನಮ್ಮನ್ನು ಇದರಿಂದ ಬದುಕಿಸಿ” ಅಂತ ಆಕೆ ಶಾಸಕರಿಗೆ ಬರೆದ ಪತ್ರದಲ್ಲಿ ಕಣ್ಣೀರಿಟ್ಟಿದ್ದಾಳೆ.
ನಾಯಿಗಳ ಜೊತೆ ದೋಸ್ತಿ… ಆಮೇಲೆ ರಕ್ತಪಾತ!:
ಈ ಕಥೆಯ ಅತಿ ದೊಡ್ಡ ಟ್ವಿಸ್ಟ್ ಇಲ್ಲಿದೆ. ಆ ಗಲ್ಲಿಯ ನಿವಾಸಿಗಳು ಸಾಕಿರುವ ಶ್ವಾನಗಳ ಜೊತೆ ಈ ಮಂಗ ಮೊದ ಮೊದಲು ಸಖತ್ ದೋಸ್ತಿ ಬೆಳೆಸಿಕೊಂಡಿತ್ತು. ಜೊತೆಯಲ್ಲೇ ಆಟ ಆಡುವುದು, ಮರದಿಂದ ಕೆಳಗೆ ಬಂದು ಕುಳಿತುಕೊಳ್ಳುವುದು ಮಾಡುತ್ತಿತ್ತು. ಆದರೆ ಆ ಸ್ನೇಹದ ಹಿಂದೆ ಒಂದು ಕ್ರೂರ ಮುಖವಿತ್ತು.
ನಾಯಿಗಳು ಮೈ ಮರೆತಾಗ ತಕ್ಷಣವೇ ದಾಳಿ ಮಾಡುವ ಈ ಮಂಗ, ಅವುಗಳ ಮೈ ಮೇಲಿನ ಚರ್ಮವನ್ನೇ ಕಿತ್ತು ಹಾಕುತ್ತಿದೆ! ಈಗ ಆ ಬೀದಿಯ ಮೂಕ ಪ್ರಾಣಿಗಳೂ ಕೂಡ ಈ ಮಂಗನ ಹೆಸರೆತ್ತಿದರೆ ಮರಗಟ್ಟುವಂತಾಗಿದೆ.
ಮಕ್ಕಳ ಆಟಕ್ಕೆ ಬಿದ್ದ ‘ಲಗಾಮು’:
ಬೆಳಗ್ಗೆ ಶಾಲೆಗೆ ಹೊರಡುವ ಪುಟಾಣಿ ಮಕ್ಕಳು, ಸಂಜೆ ಮುಸ್ಸಂಜೆ ವೇಳೆ ಮನೆಗೆ ಮರಳುವ ಹೆಣ್ಣುಮಕ್ಕಳ ಪಾಲಿಗೆ ಈ ಗಲ್ಲಿ ಈಗ ಒಂದು ಭೀತಿಯ ಗೂಡಾಗಿದೆ. ಮನೆಯಲ್ಲಿ ಪೋಷಕರಿಲ್ಲದ ಸಮಯ ನೋಡಿ ಸಣ್ಣ ಮಕ್ಕಳನ್ನು ಅಟ್ಟಾಡಿಸಿಕೊಂಡು ಹೋಗುವುದು ಈ ಮಂಗನ ದಿನನಿತ್ಯದ ಹವ್ಯಾಸವಾಗಿಬಿಟ್ಟಿದೆ. ಇದರಿಂದಾಗಿ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸುವುದಕ್ಕೂ ಹೆದರುವಂತಾಗಿದೆ. ಇಡೀ ಏರಿಯಾದ ನೆಮ್ಮದಿಯನ್ನೇ ಈ ಒಂಟಿ ಕೋತಿ ಹರಾಜು ಹಾಕಿದೆ.
ಕೊನೆಗೂ ಬಿದ್ದಿದೆ ಅರಣ್ಯ ಇಲಾಖೆಯ ಬಲೆ!:
ನಿರಂತರ ಎರಡು ವರ್ಷಗಳ ಕಾಲ ಈ ನರಕವನ್ನು ಅನುಭವಿಸಿದ ಮಣ್ಣಗುಡ್ಡೆಯ ಜನ ಕೊನೆಗೂ ರೋಸಿ ಹೋಗಿದ್ದಾರೆ. ಪೊಲೀಸ್ ಸ್ಟೇಷನ್, ಕಾರ್ಪೊರೇಷನ್ ಆಫೀಸ್, ಫಾರೆಸ್ಟ್ ಡಿಪಾರ್ಟ್‌ಮೆಂಟ್ ಅಂತ ಎಲ್ಲ ಕದವನ್ನೂ ತಟ್ಟಿದ್ದಾರೆ.
ಈಗ ಕೊನೆಗೂ ಸ್ಥಳೀಯ ಶಾಸಕರ ಮಧ್ಯಪ್ರವೇಶದಿಂದಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾಂತರಾಜ್ ಗಲ್ಲಿಗೆ ಲಗ್ಗೆ ಇಟ್ಟಿದ್ದಾರೆ. ಬೋನುಗಳನ್ನು ಇಟ್ಟು, ಬಲೆ ಬೀಸಿ ಆ ಮಾಂಸಾಹಾರಿ ಮಂಗನನ್ನು ಸೆರೆಹಿಡಿಯಲು ಕಾರ್ಯಾಚರಣೆ ತೀವ್ರಗೊಂಡಿದೆ. ಆ ಖದೀಮ ಕೊನೆಗೂ ಸಿಕ್ಕಿಬೀಳ್ತಾನಾ? ಮಣ್ಣಗುಡ್ಡೆಯ ಜನ ನಿಟ್ಟುಸಿರು ಬಿಡ್ತಾರಾ? ಕಾದು ನೋಡಬೇಕು ಅಣ್ಣಾ…