
ವಿಟ್ಲ: ಹಲವು ಕಳ್ಳತನ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುತ್ತೂರಿನ ಚಿಕ್ಕಮುಡ್ನೂರು ನಿವಾಸಿಯಾದ ಮೊಹಮ್ಮದ್ ಸಲಾಂ ಅಲಿಯಾಸ್ ಕೆ. ಎಂ. ಸಲಾಂ, ಅಲಿಯಾಸ್ ‘ಡಾಲರ್ ಸಲಾಂ’ ಬಂಧಿತ ಆರೋಪಿಯಾಗಿದ್ದಾನೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಳೆಯ ಕಳ್ಳತನ ಪ್ರಕರಣಗಳಿಗೆ (ಅ.ಕ್ರ ನಂ: 24/2020 ಮತ್ತು ಅ.ಕ್ರ ನಂ: 34/2022, ಕಲಂ 457, 380 ಐಪಿಸಿ) ಸಂಬಂಧಿಸಿದಂತೆ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ತಿರುಗುತ್ತಿದ್ದನು. ಈತನ ಪತ್ತೆಗಾಗಿ ಬಲೆ ಬೀಸಿದ್ದ ವಿಟ್ಲ ಪೊಲೀಸರು, ಜೂನ್ 16ರಂದು ಪುತ್ತೂರು ರೈಲ್ವೆ ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಸುತ್ತುವರಿದು ದಸ್ತಗಿರಿ ಮಾಡಿದ್ದಾರೆ. ಬಂಧಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ‘ಡಾಲರ್ ಸಲಾಂ’ ಸಣ್ಣಪುಟ್ಟ ಕಳ್ಳ ಅಷ್ಟೇ ಅಲ್ಲ, ಪೊಲೀಸರ ಮೇಲೆಯೇ ಕೈಮಾಡಿದ್ದ ಉದ್ಧಟ ಆರೋಪಿಯಾಗಿದ್ದಾನೆ. 2023 ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಹಾಗೂ ನಿಂದನೆ ಪ್ರಕರಣ (ಅ.ಕ್ರ: 45/2023, ಕಲಂ: 353, 332, 504 ಐ.ಪಿ.ಸಿ) ದಾಖಲಾಗಿತ್ತು. ಈ ಪ್ರಕರಣದಲ್ಲೂ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಈತನ ವಿರುದ್ಧ ಈಗಾಗಲೇ ನ್ಯಾಯಾಲಯದಿಂದ ವಾರೆಂಟ್ ಕೂಡ ಜಾರಿಯಾಗಿತ್ತು. ಕೊನೆಗೂ ವಿಟ್ಲ ಪೊಲೀಸರ ಚಾಣಾಕ್ಷ ನಡೆಯಿಂದಾಗಿ ಈ ಕುಖ್ಯಾತ ಆರೋಪಿ ಈಗ ಕಂಬಿ ಎಣಿಸುವಂತಾಗಿದೆ.