
ಸುರತ್ಕಲ್: ಪ್ರಾಥಮಿಕ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಅತ್ಯಂತ ನಿರ್ಣಾಯಕವಾದ ಘಟ್ಟವಾಗಿದೆ ಎಂದು ಎಂ,ಎಸ್,ಇ,ಝೆಡ್ ಸಿನಿಯರ್ ಮ್ಯಾನೇಜರ್ ಯೋಗೀಶ್ಕಲ್ಸಡ್ಕ ನುಡಿದರು. ಅವರು ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಎಂ,ಎಸ್,ಇ,ಝೆಡ್ ಮತ್ತು ಜೆಸಿಐ ಸುರತ್ಕಲ್ ವತಿಯಿಂದ ಉಚಿತ ನೋಟ್ಸ್ ಪುಸ್ತಕ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರಲ್ಲದೆ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿ ಈ ಮಟ್ಟದಲ್ಲಿ ಬೆಳೆದಿರುವುದು ಶ್ಲಾಘನೀಯ ಮುಂದಿನ ಶಾಲೆಯ ಬೆಳವಣಿಗೆಗೆ ನಮ್ಮ ಸಂಸ್ಥೆಯ ಸದಾ ಸಹಕಾರವಿದೆ ಎಂದರು. ವೇದಿಕೆಯಲ್ಲಿ ಜೆಸಿಐ ಸುರತ್ಕಲ್ ಅಧ್ಯಕ್ಷ ಅಶೋಕ್ ಎನ್, ಪೂರ್ವಧ್ಯಕ್ಷರಾದ ಎಂ.ಜಿ.ರಾಮಚಂದ್ರರಾವ್, ಕೋಶಾಧಿಕಾರಿ ಸಂತೋಷ್, ಎಂ,ಎಸ್,ಇ,ಝೆಡ್ ಅಧಿಕಾರಿಗಳಾದ ಮಹಮ್ಮದ್ ಹನೀಫ್, ಸಂದೀಪ್ ಶೆಟ್ಟಿ, ಜೆಸಿಐ ಸುರತ್ಕಲ್ ನ ಸದಸ್ಯರಾದ ಸುನೀಲ್, ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಕೋಶಾಧಿಕಾರಿ ವಿಠಲ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಶಶಿಕಲಾ ಸದಸ್ಯರಾದ ಪರಮೇಶ್ವರ ರಿತೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅನಿಲ್ ಸಾಲ್ಯಾನ್ ವಹಿಸಿದರು. ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ಜೇನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಸಹ ಶಿಕ್ಷಕಿ ಶೈಲಾ ಕಾರ್ಯಕ್ರಮ ನಿರೂಪಿಸಿದರು.