
ಹಳೆಯಂಗಡಿ: ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ ಹಾಗೂ ಮಹಿಳಾ ಮಂಡಲದ ಆಶ್ರಯದಲ್ಲಿ ಗ್ರಾಮದ ಅಂಗನವಾಡಿ, ಶಾಲೆ ಹಾಗೂ ಆರ್ಥಿಕವಾಗಿ ಹಿಂದುಳಿದ ಗ್ರಾಮದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸವಲತ್ತುಗಳ ವಿತರಣಾ ಸಮಾರಂಭವು ಎಂಆರ್‌ಪಿಎಲ್ ನ ಮ್ಯಾನೇಜರ್ ರಿತೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾರತೀಯ ಜನತಾ ಪಕ್ಷದ ಮುಲ್ಕಿ ಮೂಡಬಿದ್ರೆ ಮಂಡಲದ ಅಧ್ಯಕ್ಷರಾದ ದಿನೇಶ್ ಪುತ್ರನ್ ಹಾಗೂ ಮುಲ್ಕಿ ಮಾನಂಪಾಡಿ ಶಾಲೆಯ ಸಹ ಶಿಕ್ಷಕಿ ವಸಂತಿ ಕುಮಾರಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ಇನ್ನಿತರ ಸವಲತ್ತುಗಳನ್ನು ವಿತರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಿತೇಶ್ ಕುಮಾರ್ ರವರು ವಿದ್ಯಾರ್ಜನೆಯ ಜೊತೆಗೆ ವಿದ್ಯಾರ್ಥಿಗಳು ದೇಶದ ಸುಸಂಸ್ಕೃತ ನಾಗರಿಕರಾಗಿ ಬೆಳೆಯಬೇಕು, ಕಲಿತ ಶಾಲೆ, ಸಹಕರಿಸಿದ ಸಂಸ್ಥೆಗಳ ಬೆನ್ನೆಲುಬಾಗಿ ನಿಲ್ಲುವಂತಾಗಬೇಕು ಎಂದು ಕರೆ ನೀಡಿದರು.ದಿನೇಶ್ ಪುತ್ರನ್ ರವರು ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳು ಮಹತ್ವದ ಜವಾಬ್ದಾರಿ ವಹಿಸುತ್ತಿದ್ದು ತೋಕೂರುವಿನ ವಿದ್ಯಾರ್ಥಿಗಳು, ಜನತೆ ಅದೃಷ್ಟವಂತರು ಎಂದು ತಿಳಿಸಿದರು. ವಸಂತಿ ಕುಮಾರಿಯವರು ಮಾತನಾಡಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಬೇಕು ಎಂದರು.
ಯುವಕ ಸಂಘದ ಅಧ್ಯಕ್ಷರಾದ ವಾಮನ ಎಸ್ ದೇವಾಡಿಗ ಸ್ವಾಗತಿಸಿದರು ಮಹಿಳಾ ಮಂಡಲದ ಅಧ್ಯಕ್ಷೆ ಮೇಘನ ಅಡಿಗ ಧನ್ಯವಾದ ತಿಳಿಸಿದರು. ಯುವಕ ಸಂಘದ ಜೊತೆ ಕಾರ್ಯದರ್ಶಿ ಭೂಷಣ್ ಹಾಗೂ ಮಹಿಳಾ ಮಂಡಲದ ಕಾರ್ಯದರ್ಶಿ ಮೋಹಿನಿ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿದರು. ಯುವಕ ಸಂಘದ ಉಪಾಧ್ಯಕ್ಷ ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು.