
ಮಂಗಳೂರು: ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ಚಳುವಳಿಗಳ ಒಡನಾಡಿಯಾಗಿ, ಜಾತಿ ಮತ ಧರ್ಮ ಭಾಷೆ ಗಳ ಆಚೆಗೆ ನಿಂತು, ಸದಾ ಎಲ್ಲ ಬಡವರ, ಶೋಷಿತರ, ಯುವಜನರ, ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗಾಗಿ ದುಡಿಯುತ್ತಾ, ಜಿಲ್ಲೆಯಲ್ಲಿ ಮತೀಯ ಶಾಂತಿ ಸಾಮರಸ್ಯದ ಸಂರಕ್ಷಣೆಗಾಗಿ ನಿರಂತರ ಹೋರಾಡುತ್ತಲೇ ಬಂದಿರುವ ಮಾಜಿ ಪತ್ರಕರ್ತ, ಚಿಂತಕ, ಜನಪರ ಹೋರಾಟಗಾರ ಹಾಗೂ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಪಿ ವಿ ಮೋಹನ್ ಅವರನ್ನು ಜೂನ್ 18ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನ ಸದಸ್ಯರು, ಪಕ್ಷ ಬೇಧ ಮರೆತು, ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.

ಕಲುಷಿತ ಗೊಂಡಿರುವ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ವಿರಳ ಎನ್ನಬಹುದಾದ ಸರಳ – ಸಜ್ಜನಿಕೆಯ ರಾಜಕೀಯ ನೇತಾರರಾದ ಪಿ ವಿ ಮೋಹನ್ ಅವರನ್ನು, ತಡವಾಗಿ ಆದರೂ, ವಿಧಾನ ಪರಿಷತ್ ಚುನಾವಣೆಗೆ ತನ್ನ ಅಭ್ಯರ್ಥಿ ಯಾಗಿ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿ ಪಕ್ಷಗಳ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕಾಂಗ್ರೆಸ್ ನ ಹಿರಿಯ ನೇತಾರ ಹಾಗೂ ಕೆ ಪಿ ಸಿ ಸಿ ನ ನಿಯೋಜಿತ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಮತ್ತು ಈ ಆಯ್ಕೆಯಲ್ಲಿ ಸಹಕರಿಸಿದ ಎಲ್ಲರಿಗೂ ನಾವು ಅಭಿನಂದನೆಗಳನ್ನು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.
ಸಾಮಾಜಿಕ ಬದ್ಧತೆ ಮತ್ತು ಕಾಳಜಿ ಇರುವ ಪಿ ವಿ ಮೋಹನ್ ಅವರು ರಾಜ್ಯ ಶಾಸನ ಸಭೆಗೆ ಆಯ್ಕೆ ಆಗುವ ದಿನದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ಹಾಗೂ ವೃತ್ತಿ ರಾಜಕಾರಣಕ್ಕೆ ಭಿನ್ನವಾದ, ಜನಪರ ರಾಜಕಾರಣದ ಹೊಸ ಅಧ್ಯಾಯವೊಂದು ಆರಂಭಗೊಳ್ಳಲಿದೆ ಮತ್ತು ಇದು ರಾಜ್ಯಕ್ಕೆ ಮಾದರಿಯಾಗಲಿದೆ. ಮಾತ್ರವಲ್ಲ, ಪಿ ವಿ ಮೋಹನ್ ಅವರು ರಾಜ್ಯ ವಿಧಾನ ಪರಿಷತ್ ನಲ್ಲಿ ರಾಜ್ಯದ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ, ದನಿ ಇಲ್ಲದ ಶೋಷಿತ ಜನಸಮುದಾಯಗಳ, ವಿದ್ಯಾರ್ಥಿ ಯುವಜನರ ಆಶೋತ್ತರಗಳ ಗಟ್ಟಿ ದನಿಯಾಗಿ ಹೊರಹೊಮ್ಮಲಿದ್ದಾರೆ. ಇದರಿಂದ ಇಡೀ ರಾಜ್ಯಕ್ಕೆ ಒಳಿತಾಗಲಿದೆ ಎಂದು ನಾವು ದೃಢ ವಿಶ್ವಾಸ ಹೊಂದಿದ್ದೇವೆ ಎಂದರು.
ಕಮಲ, ಅಹಿಂದ ಉಪಾಧ್ಯಕ್ಷ ಬಿ.ಎ.ಎಂ.ಹನೀಫ್, ಅಶೋಕ್ ಭಟ್, ಪದ್ಮನಾಭ, ರೆನ್ನಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
