ಪಕ್ಷಿಕೆರೆಯಲ್ಲಿ ಸಂಭ್ರಮದ `ಆಟಿಡೊಂಜಿ ಐತಾರ’: ಸಂಸ್ಕೃತಿ-ಸಂಸ್ಕಾರದ ಬದುಕಿಗೆ ಕರೆ

ಪಕ್ಷಿಕೆರೆ: ಇಲ್ಲಿನ ಮದರ್ ತೆರೇಜಾ ಲೇಔಟ್‌ನ ನಾಗರಿಕರ ವತಿಯಿಂದ ‘ಆಟಿಡೊಂಜಿ ಐತಾರ’ ಸಾಂಸ್ಕೃತಿಕ ಕಾರ್ಯಕ್ರಮವು ಇತ್ತೀಚಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೀತಾ ಮಹಾಬಲ ಶೆಟ್ಟಿ, “ತುಳುನಾಡಿನ ಆಟಿ ಆಚರಣೆಗಳು ನಮ್ಮ ವೈಭವಯುತ ಸಂಸ್ಕೃತಿಯ ಪ್ರತೀಕವಾಗಿದ್ದು, ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿರಂತರ ಕೆಲಸವಾಗಬೇಕು” ಎಂದರು.

ಸಮಾಜ ಸೇವಕಿ ರುಫಿನಾ ಡಿಸೋಜ ಪಕ್ಷಿಕೆರೆ ಮಾತನಾಡಿ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸಲು ಇಂತಹ ಆಟಿ ಗೌಜಿ-ಗಮ್ಮತ್ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತಂದು, ಅವರಿಗೆ ಕಾರ್ಯಕ್ರಮದ ಜವಾಬ್ದಾರಿ ನೀಡುವ ಅಗತ್ಯವಿದೆ ಎಂದರು.

‘ಆಟಿದ ಮದಿಪು’ ನೀಡಿದ ಯಶೋಧ ಕಾಂತಪ್ಪ, “ಪೂರ್ವಜರ ಕಾಲದಲ್ಲಿ ನಾವು ತಿನ್ನುವ ಆಹಾರವೇ ಮದ್ದಾಗಿತ್ತು. ಆದರೆ ಇಂದು ಪ್ರಾಕೃತಿಕ ವಿನಾಶದ ಜತೆಗೆ ಬೆಳೆಯುವ ಮಣ್ಣು ವಿಷವಾಗುತ್ತಿದೆ. ನಮ್ಮ ದಿನಚರಿ, ಆಹಾರ ಪದ್ಧತಿ ಹಾಗೂ ಆಚಾರ-ವಿಚಾರಗಳನ್ನು ತಿದ್ದಿಕೊಳ್ಳಬೇಕಿದೆ. ಯುವಜನತೆಗೆ ಈ ಸತ್ಯವನ್ನು ತಿಳಿಸಿ, ಅವರನ್ನು ಮೂಲ ಸಂಸ್ಕೃತಿ ಹಾಗೂ ಸಂಸ್ಕಾರದ ಬದುಕಿನತ್ತ ಸೆಳೆಯಲು ಆಟಿ ಆಚರಣೆಗಳು ಪೂರಕ” ಎಂದು ಪ್ರತಿಪಾದಿಸಿದರು. **ಶ್ರೀಮತಿ ಲೀಲಾವತಿ ಭಾಸ್ಕರ್** ಮಾತನಾಡಿ, ತುಳುನಾಡಿನಲ್ಲಿ ಆಟಿ ತಿಂಗಳು ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವ ಪಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕರಾದ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ, ಮಲ್ಲಿಕಾ ಅಣ್ಣಪ್ಪ, ಕರುಣಾಕರ ಶೆಟ್ಟಿಗಾರ್ ಹಾಗೂ ಶಕುಂತಳಾ ಕರುಣಾಕರ ಅವರನ್ನು `ಆಟಿದ ತಮ್ಮನ’ ನೀಡಿ ಗೌರವಪೂರ್ವಕವಾಗಿ ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜೆಸಿಂತಾ ಡಿಸೋಜ ಪಕ್ಷಿಕೆರೆ, ಸರಸ್ವತಿ, ವೇದಾವತಿ ಜಯಶೀ, ಲತಾ ಯೋಗೀಶ್ ಶೆಟ್ಟಿ ಮತ್ತು ಪದ್ಮಾವತಿ ಶೆಟ್ಟಿಗಾರ್ ಉಪಸ್ಥಿತರಿದ್ದು, ಅಪಾರ ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿದ್ದರು.

ವಿವಿಧ ಜಾನಪದ ಆಟೋಟ, ಸಾಂಸ್ಕೃತಿಕ ಕಳೆ:
ಪುಟಾಣಿ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಸ್ವಾಗತ ಕೋರಿದರು. ಮಂಜುಳಾ ಮತ್ತು ಶೈವೀನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ತುಳುನಾಡಿನ ಸಾಂಪ್ರದಾಯಿಕ ಹಾಗೂ ಜಾನಪದ ಚಟುವಟಿಕೆಗಳು, ವಿವಿಧ ಆಟೋಟಗಳು ಮತ್ತು ರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

error: Content is protected !!