23.67 ಲಕ್ಷ ರೂಪಾಯಿ ಮೌಲ್ಯದ ಚಿನ್ನ-ನಗದು ಸಹಿತ ಇಬ್ಬರು ಅಂತರರಾಜ್ಯ ಕಳ್ಳರ ಬಂಧನ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ಸರಣಿ ಮನೆ ಕಳ್ಳತನ ನಡೆಸುತ್ತಿದ್ದ ಇಬ್ಬರು ಅಂತರರಾಜ್ಯ ಖದೀಮರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಬರೋಬ್ಬರಿ 23.67 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಕೊಳ್ನಾಡು ನಿವಾಸಿಗಳಾಗಿದ್ದು, ಸದ್ಯ ಕೇರಳದ ಕಾಸರಗೋಡಿನಲ್ಲಿ ತಲೆಮರೆಸಿಕೊಂಡಿದ್ದ ಹಮೀದ್ ಮತ್ತು ಜಾಬೀರ್ @ ಜಾಬೀ ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ: ಏಪ್ರಿಲ್ 5ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ದೊಡ್ಡ ಮಟ್ಟದ ಚಿನ್ನ ಹಾಗೂ ನಗದು ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾಗಿದ್ದ ಪ್ರಕರಣದ (ಅ.ಕ್ರ: 38/2026) ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೇ 15ರಂದು ಮೊದಲು ಆರೋಪಿ ಹಮೀದ್‌ನನ್ನು ಕಾರು ಸಹಿತ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಬಂಧಿತ ಹಮೀದ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತನ ಸಹಚರ ಜಾಬೀರ್ ಕುರಿತು ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಜೂನ್ 7ರಂದು ಕಾರ್ಯಾಚರಣೆ ನಡೆಸಿದ ತನಿಖಾ ತಂಡ, ಮತ್ತೋರ್ವ ಆರೋಪಿ ಜಾಬೀರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
23.67 ಲಕ್ಷ ಮೌಲ್ಯದ ಸೊತ್ತು ವಶ: ಬಂಧಿತರಿಂದ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಕಳ್ಳತನಕ್ಕೆ ಸಂಬಂಧಿಸಿದ 68.690 ಗ್ರಾಂ ಚಿನ್ನಾಭರಣ, 2,00,000 ರೂಪಾಯಿ ನಗದು ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಕಳ್ಳತನ ಪ್ರಕರಣಕ್ಕೆ (ಅ.ಕ್ರ: 28/2025) ಸಂಬಂಧಿಸಿದ 21.810 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜೂನ್ 7ರಂದು ಜಾಬೀರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸ್ ತನಿಖೆಯ ವೇಳೆ ಈ ಇಬ್ಬರು ಅಂತರರಾಜ್ಯ ಕಳ್ಳರು ಕೇವಲ ಈ ಎರಡು ಪ್ರಕರಣ ಮಾತ್ರವಲ್ಲದೆ ಉಪ್ಪಿನಂಗಡಿ, ಬಂಟ್ವಾಳ ನಗರ ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕಳ್ಳತನ ಸೇರಿದಂತೆ ಒಟ್ಟು 5 ಸರಣಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ: ಬೆಳ್ತಂಗಡಿ ಉಪವಿಭಾಗಾಧೀಕ್ಷಕರಾದ ರೋಹಿಸಿ ಸಿ.ಕೆ. ರವರ ನೇತೃತ್ವದಲ್ಲಿ ನಡೆದ ಈ ಭೇಟೆಯ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ. ರವಿ ಬಿ.ಎಸ್‌., ಉಪ್ಪಿನಂಗಡಿ ಗ್ರಾಮಾಂತರ ಸಿ.ಪಿ.ಐ. ನಾಗರಾಜ್‌ ಹೆಚ್‌.ಇ., ಪುಂಜಾಲಕಟ್ಟೆ ಪಿ.ಎಸ್‌.ಐ. ರಾಜೇಶ್‌ ಕೆ.ವಿ. ಹಾಗೂ ಸಿಬ್ಬಂದಿಗಳಾದ ASI ಗಳಾದ ಬೆನ್ನಿಚ್ಚನ್‌, ವಿಶ್ವನಾಥ ನಾಯ್ಕ್ ಮತ್ತು ಸುಂದರ ಶೆಟ್ಟಿ, ಪ್ರವೀಣ್‌ ಮೂರುಗೋಳಿ, ರಾಜೇಶ್‌ ಎ.ನ್‌, ವಿಜಯ್‌ ಕುಮಾರ್‌ ರೈ, ರಾಹುಲ್‌ ರಾವ್‌, ಸಂತೋಷ್‌, ಬಸವರಾಜ್‌, ರಜಿತ್‌, ನಾಗರಾಜ್‌ ಭಾಗವಹಿಸಿದ್ದರು. ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್‌ ಮತ್ತು ಸಂಪತ್‌ ತಾಂತ್ರಿಕ ನೆರವು ನೀಡಿದ್ದಾರೆ. ಮುನ್ನಡೆಸಿದ ಇಡೀ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

error: Content is protected !!