ಅಮ್ಮನ ನೆನಪಿಗಾಗಿ ಬಡಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಪುತ್ರರು!

ಮಂಗಳೂರು: ಮೂಡುಶೆಡ್ಡೆ ಹೊಸಲಕ್ಕೆ ದಿ.ದೇವಕಿ ಸಂಜೀವ ಶೆಟ್ಟಿ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಪುತ್ರರು ಕೊರಗ ಸಮುದಾಯಕ್ಕೆ ಸೇರಿದ ಗಿರಿಜ ಎಂಬವರಿಗೆ ನೂತನವಾಗಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ನಡೆಯಿತು.


ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮನೆಯ ಕೀಲಿ ಕೈ ಹಸ್ತಾಂತರಿಸಿದರು.
ಬಳಿಕ ಮಾತಾಡಿದ ವಕೀಲ ಹೊಸಲಕ್ಕೆ ಉಮೇಶ್ ಶೆಟ್ಟಿ ಅವರು, “ಅಮ್ಮ ದಿವಂಗತ ದೇವಕಿ ಶೆಟ್ಟಿಯವರು ನೊಂದವರು, ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದ ಜೀವ. ಅವರ ಮಾರ್ಗದರ್ಶನದಲ್ಲೇ ಬೆಳೆದ ನಾವು ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಗಾಗಿ ಸಮಾಜಕ್ಕೆ ನಮ್ಮಿಂದಾದ ಸೇವೆ ಸಲ್ಲಿಸಬೇಕು ಎಂಬ ದೃಷ್ಟಿಯಿಂದ ಮೂಡುಶೆಡ್ಡೆ ಪಂಚಾಯತ್ ಅನ್ನು ಸಂಪರ್ಕಿಸಿದ್ದೆವು. ಅಲ್ಲಿನ ಪಿಡಿಒ ಅವರು ಮನೆ ಸಂಪೂರ್ಣವಾಗಿ ಕುಸಿದುಬಿದ್ದು ಸಮಸ್ಯೆಯನ್ನು ಎದುರಿಸುತ್ತಿದ್ದ ಕೊರಗ ಸಮುದಾಯದ ಗಿರಿಜ ಅವರ ಕುಟುಂಬವನ್ನು ನಮಗೆ ತೋರಿಸಿದ್ದು ಅವರಿಗೆ 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಹಂಚಿನ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ನಮಗೆ ಜನರ ಆಶೀರ್ವಾದ ಇದ್ದರೆ ಸಾಕು. ಮನೆಯಲ್ಲಿ ತಾಯಿ ಮತ್ತು ಶಾಲೆಗೆ ಹೋಗುವ ಇಬ್ಬರು ಸಣ್ಣ ಮಕ್ಕಳಿದ್ದು ಎಲ್ಲರಂತೆ ಅವರು ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಮನೆಗೆ ಟೈಲ್ಸ್ ಅಳವಡಿಸಿ ಟಿವಿ ಸಹಿತ ಎಲ್ಲವನ್ನೂ ಒದಗಿಸಿದ್ದೇವೆ. ಎಲ್ಲರೂ ನಮ್ಮಂತೆ ಸಮಾಜಕ್ಕೆ ನೆರವಾಗುವ ಪ್ರಾಮಾಣಿಕ ಉದ್ದೇಶ ಹೊಂದಿದ್ದರೆ ಸಮಾಜ ಅಭಿವೃದ್ಧಿಯಾಗುತ್ತದೆ“ ಎಂದರು.


ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಮಾತಾಡಿ, “ಹಿಂದಿನ ಕಾಲದಲ್ಲಿ ಜನರಿಗೆ ಜೀವನ ನಿರ್ವಹಣೆ ಕಷ್ಟವಿತ್ತು. ಮನೆಯಲ್ಲಿ ಕಡು ಬಡತನವಿದ್ದರೂ ಮಕ್ಕಳಿಗೆ ಸಂಸ್ಕಾರ ಕಲಿಸುತ್ತಿದ್ದರು. ಹೀಗಾಗಿ ಹೊಸಲಕ್ಕೆ ಉಮೇಶ್ ಶೆಟ್ಟಿ ಸೋದರರು ಇಂಥ ಸಾರ್ಥಕ ಸೇವೆಯನ್ನು ಸಲ್ಲಿಸಲು ಸಾಧ್ಯವಾಗಿದೆ. ಇಂದಿನ ಮುಂದುವರಿದ ಯುಗದಲ್ಲೂ ನಮ್ಮ ಮನೆಯ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಮಾಜದ ನೊಂದವರಿಗೆ ನೆರವಾಗುವ ಗುಣವನ್ನು ಬೆಳೆಸಿಕೊಳ್ಳಲು ಪ್ರೆರೇಪಿಸಬೇಕು. ಇದರಿಂದ ಸಮಾಜ ಬಲಿಷ್ಠಗೊಳ್ಳಲಿದೆ“ ಎಂದರು.


ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತಾಡಿ, ”ಹೆತ್ತವರನ್ನು ವಯಸ್ಸಾಯ್ತು ಎಂದು ವೃದ್ಧಾಶ್ರಮ ಸೇರಿಸುವ ಈ ಕಾಲದಲ್ಲಿ ಹೆತ್ತವರ ಮಾತನ್ನು ಉಳಿಸಬೇಕು ಅವರ ಆದರ್ಶ ಸಮಾಜಕ್ಕೆ ಮಾದರಿಯಾಗಬೇಕು ಎಂಬ ನಿಟ್ಟಿನಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುಂದಾಗಿದ್ದು ಶ್ಲಾಘನೀಯ ಸಂಗತಿ. ಇದು ನಿಜವಾದ ಭಗವಂತನ ಕಾರ್ಯ. ಅವರ ಇಡೀ ಕುಟುಂಬಕ್ಕೆ ಒಳಿತಾಗಲಿ“ ಎಂದು ಶುಭ ಹಾರೈಸಿದರು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ”ಸಮಾಜದ ಎಲ್ಲರೂ ಜಾತಿ ಮತ ಬೇಧ ಮರೆತು ಒಗ್ಗೂಡಿದಾಗ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡಲು ಸಾಧ್ಯ. ನಾವು ಹಿಂದಿನ ಕಾಲದಲ್ಲಿ ಇದೇ ರೀತಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತ ನೆಮ್ಮದಿಯಿಂದ ಬದುಕುತ್ತಿದ್ದೆವು. ಈಗಿನ ಕಾಲದಲ್ಲಿ ಅಂತಹ ಅಪರೂಪದ ಗುಣವನ್ನು ಹೊಂದಿರುವ ಇವರಿಗೆ ದೇವರು ಇನ್ನಷ್ಟು ಶಕ್ತಿ ಕೊಡಲಿ“ ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಇಬ್ರಾಹಿಂ ಗಡಿಯಾರ್, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ಮಂಜುನಾಥ್ ಭಂಡಾರಿ ಶೆಡ್ಡೆ, ಉದ್ಯಮಿ ಮಹೇಶ್ವರಪ್ಪ, ಮೂಡುಶೆಡ್ಡೆ ಪಂಚಾಯತ್ ಪಿಡಿಒ ಜಯಪ್ರಕಾಶ್, ಪ್ರಕಾಶ್ ಪೂಜಾರಿ, ಶಿವರಾಮ್ ಮಲ್ಲಿ, ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ, ಕೊರಗ ಸಂಘದ ಜಿಲ್ಲಾಧ್ಯಕ್ಷ ಸುಂದರ ಬೆಳುವಾಯಿ, ವಿಶ್ವನಾಥ ಶೆಟ್ಟಿ ಹೊಸಲಕ್ಕೆ, ಕರುಣಾಕರ ಶೆಟ್ಟಿ ಹೊಸಲಕ್ಕೆ, ಕುಸುಮ ದಾಸಣ್ಣ ಶೆಟ್ಟಿ, ಗಡಿ ಪ್ರಧಾನರಾದ ಜತ್ತಿ ಪೂಜಾರಿ ಜಾರ ಮತ್ತಿತರರು ಉಪಸ್ಥಿತರಿದ್ದರು.
ಉಮೇಶ್ ಶೆಟ್ಟಿ ಹೊಸಲಕ್ಕೆ ಅತಿಥಿಗಳನ್ನು ಸ್ವಾಗತಿಸಿದರು. ಶರಣ್ ಶೆಟ್ಟಿ ಪೊಸಲಕ್ಕೆ ದೇವರನ್ನು ಸ್ತುತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

ಮೂಡುಶೆಡ್ಡೆ ನೇಜಿಗುರಿಯ ಕೊರಗ ಸಮುದಾಯಕ್ಕೆ ಸೇರಿದ ಬಡಕುಟುಂಬಕ್ಕೆ ಮನೆ ಇಲ್ಲದ ಹಿನ್ನೆಲೆಯಲ್ಲಿ ವಕೀಲರಾದ ಉಮೇಶ್ ಶೆಟ್ಟಿ ಮತ್ತು ಸೋದರರು ಸುಸಜ್ಜಿತ ಮನೆ ಕಟ್ಟಿಕೊಟ್ಟಿದ್ದಾರೆ. ಇದು ದೇವರು ಮೆಚ್ಚುವ ಕೆಲಸ. ನಾವು ಸಮಾಜದಲ್ಲಿ ನೊಂದವರಿಗೆ ಅಶಕ್ತರಿಗೆ ನೆರವಾದರೆ ನಮಗೆ ದೇವರ ಆಶೀರ್ವಾದ ಖಂಡಿತಾ ಇರುತ್ತದೆ. ಅವರ ಕುಟುಂಬಕ್ಕೆ ಇನ್ನಷ್ಟು ಬಡಜನರಿಗೆ ನೆರವಾಗುವ ಶಕ್ತಿ ಸಿಗಲಿ.
ರಮೇಶ್ ಎದುರುಪದವು
ಕೊರಗ ಸಂಘದ ಮಾಜಿ ಜಿಲ್ಲಾಧ್ಯಕ್ಷ

error: Content is protected !!