
ಮೂಡಬಿದ್ರೆ: ಛಾವಣಿಯ ಮೇಲೆ ಶೀಟ್ ಅಳವಡಿಸುವಾಗ ನಾಲ್ಕನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡೆಪಲ್ಲದಲ್ಲಿ ಸಂಭವಿಸಿದೆ.
ಮೃತನನ್ನು ಮಾರ್ಪಾಡಿ ಗ್ರಾಮದ ಪಾದೆಮನೆ ನಿವಾಸಿ ಸಂತೋಷ್ ಆಚಾರ್ಯ ಎಂಬವರ ಪುತ್ರ ಶೌರ್ಯ ಆಚಾರ್ಯ ಎಂದು ಗುರುತಿಸಲಾಗಿದೆ.
ಶೌರ್ಯ ದ್ವಿತೀಯ ಪಿಯುಸಿ ಓದುತ್ತಿದ್ದು ರಜಾದಿನಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದೆ. ಕಡೆಪಲ್ಲದ ಗಾಂಧಿನಗರದಲ್ಲಿರುವ ‘ರಾಯಲ್ ಪ್ಯಾರಡೈಸ್’ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಶೀಟ್ ಅಳವಡಿಸುವ ಕೆಲಸ ಮಾಡುತ್ತಿದ್ದಾಗ ಸಮತೋಲನ ತಪ್ಪಿ ಬಿದ್ದು ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದ ಕಾರಣ ಅವರು ಸಾವನ್ನಪ್ಪಿದ್ದಾರೆ. ಮೂಡಬಿದ್ರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.