“ಬಂದರೋ ಬಂದರೋ ಬಾವ ಬಂದರೋ..!” ನೂತನ ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ಮೊಯ್ದೀನ್ ಬಾವಾ: ರಾಜಕೀಯ ವಲಯದಲ್ಲಿ ಭಾರೀ ಕುತೂಹಲ

ಮಂಗಳೂರು: ಕರಾವಳಿ ರಾಜಕಾರಣದಲ್ಲಿ ಇದೀಗ ದೊಡ್ಡದೊಂದು ರಾಜಕೀಯ ಧ್ರುವೀಕರಣದ ಮುನ್ಸೂಚನೆ ಸಿಕ್ಕಿದ್ದು, “ಬಂದರೋ ಬಂದರೋ ಬಾವ ಬಂದರೋ..!” ಎಂಬ ಚರ್ಚೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜೋರಾಗಿ ಕೇಳಿಬರುತ್ತಿದೆ. ಮಂಗಳೂರು ಉತ್ತರದ ಮಾಜಿ ಶಾಸಕ ಬಿ.ಎ. ಮೊಯ್ದೀನ್ ಬಾವಾ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಖುದ್ದಾಗಿ ಭೇಟಿಯಾಗಿ ಶುಭಾಶಯ ಸಲ್ಲಿಸಿರುವುದು ಕೈ ಪಡಸಾಲೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಅಂತಿಮ ಕ್ಷಣದಲ್ಲಿ ತಪ್ಪಿದ್ದ ಟಿಕೆಟ್; ಜೆಡಿಎಸ್ ಸೇರಿದ್ದ ಬಾವಾ
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಲು ಮೊಯ್ದೀನ್ ಬಾವಾ ಅವರು ಸಂಪೂರ್ಣ ಸಿದ್ಧತೆ ನಡೆಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಅವರಿಗೆ ಟಿಕೆಟ್ ಕೈತಪ್ಪಿತ್ತು. ಪಕ್ಷದೊಳಗಿನ ಕೆಲವು ನಾಯಕರ ಅಡ್ಡಗಾಲೇ ತಮಗೆ ಟಿಕೆಟ್ ಸಿಗದಿರಲು ಕಾರಣ ಎಂದು ಗಂಭೀರ ಆರೋಪ ಮಾಡಿದ್ದ ಬಾವಾ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲುಂಡಿದ್ದ ಬಾವಾ, ಆ ಬಳಿಕ ಮತ್ತೆ ಮಾತೃಪಕ್ಷ ಕಾಂಗ್ರೆಸ್‌ಗೆ ಮರಳಲು ತೆರೆಮರೆಯ ಪ್ರಯತ್ನ ನಡೆಸಿದ್ದರು. ಆದರೆ, ಸ್ಥಳೀಯ ಕೆಲವು ಪ್ರಭಾವಿ ನಾಯಕರು ಅವರು ಪಕ್ಷಕ್ಕೆ ಬರದಂತೆ ತಡೆಗೋಡೆಯಾಗಿದ್ದರು ಎನ್ನಲಾಗಿತ್ತು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಮಾಜಿ ಶಾಸಕ ಮೊಯ್ದೀನ್ ಬಾವಾ ಅವರು ಸಿದ್ದರಾಮಯ್ಯ ಅವರಿಗೆ ಅತ್ಯಂತ ಆಪ್ತರಾಗಿದ್ದವರು. ಸಿದ್ದರಾಮಯ್ಯ ಅವರು ಮಂಗಳೂರಿಗೆ ಬಂದಾಗಲೆಲ್ಲಾ ಬಾವಾ ಅವರ ಮನೆಗೆ ಭೇಟಿ ನೀಡಿ ತಿಂಡಿ ಸವಿಯುತ್ತಿದ್ದರು. ಹಿಂದೆ ಸಿದ್ದರಾಮಯ್ಯ ಅವರು ಮಂಗಳೂರಿಗೆ ಬಂದಿದ್ದಾಗ, ಬಾವಾ ಅವರು ಅವರನ್ನು ತಮ್ಮ ಜೊತೆಯಲ್ಲೇ ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ, ಕಳೆದ ಚುನಾವಣೆಯ ಅಸಮಾಧಾನದಿಂದ ಜೆಡಿಎಸ್ ಸೇರಿದ್ದ ಬಾವಾ ಅವರಿಗೆ, ಇತ್ತೀಚಿನ ಜೆಡಿಎಸ್-ಬಿಜೆಪಿ ಮೈತ್ರಿ ಕಿಂಚಿತ್ತೂ ಇಷ್ಟವಿರಲಿಲ್ಲ. ಈ ಮೈತ್ರಿಯಿಂದ ತೀವ್ರ ಅತೃಪ್ತರಾಗಿದ್ದ ಅವರು, ಸದ್ಯ ಜೆಡಿಎಸ್‌ನ ಯಾವುದೇ ರಾಜಕೀಯ ಚಟುವಟಿಕೆಗಳಲ್ಲೂ ಗುರುತಿಸಿಕೊಳ್ಳದೆ ದೂರ ಉಳಿದಿದ್ದರು.

ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ಐತಿಹಾಸಿಕ ಹಿನ್ನೆಲೆಯಲ್ಲಿ, ನಿನ್ನೆ ಬೆಂಗಳೂರಿನಲ್ಲಿ ಮೊಯ್ದೀನ್ ಬಾವಾ ಅವರು ಡಿಕೆಶಿಯವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿ ಶುಭ ಹಾರೈಸಿದ್ದಾರೆ. ಈ ಭೇಟಿಯ ಫೋಟೋಗಳು ಹೊರಬೀಳುತ್ತಿದ್ದಂತೆ ಬಾವಾ ಅಭಿಮಾನಿಗಳ ವಲಯದಲ್ಲಿ ಹೊಸ ಆಶಾಕಿರಣ ಮೂಡಿದೆ. ಪಕ್ಷದಲ್ಲಿ ಕೆಲವರು ಅಡ್ಡಗಾಲು ಹಾಕುತ್ತಿದ್ದರೂ, ಈಗ ನೇರವಾಗಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ಮಟ್ಟದಲ್ಲೇ ಮಾತುಕತೆ ನಡೆಸಿರುವುದರಿಂದ, ಮುಂದಿನ ಲೋಕಸಭೆ ಅಥವಾ ಮಹತ್ವದ ಚುನಾವಣೆಗಳ ಸಂದರ್ಭದಲ್ಲಿ ಮೊಯ್ದೀನ್ ಬಾವಾ ಅವರು ಮತ್ತೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುವುದು ಪಕ್ಕಾ ಎಂದು ಅವರ ಆಪ್ತ ವಲಯಗಳು ಖಚಿತಪಡಿಸುತ್ತಿವೆ.

error: Content is protected !!