ಸಾರ್ವಜನಿಕರ ಪಾಲಿಗೆ ಕಂಟಕವಾದ ಸುರತ್ಕಲ್‌ ಪ್ಲೈಓವರ್‌: ಮಳೆಗೆ ಕುಸಿಯುತ್ತಿದೆ ಸಿಮೆಂಟ್ ತುಂಡುಗಳು, ತಪ್ಪಿದ ಭಾರಿ ದುರಂತ!

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪ್ಲೈಓವರ್ ಕಾಮಗಾರಿಯ ಅಸಲಿ ಬಣ್ಣ ಈಗ ಬಯಲಾಗಿದ್ದು, ಸಾರ್ವಜನಿಕರ ಪಾಲಿಗೆ ಇದು ಕಂಟಕವಾಗಿ ಪರಿಣಮಿಸಿದೆ. ಪ್ಲೈಓವರ್‌ನ ಸಿಮೆಂಟ್ ಕಾಂಕ್ರೀಟ್ ಸಂಪೂರ್ಣ ದುರ್ಬಲಗೊಂಡು, ಮೇಲಿನಿಂದ ದೊಡ್ಡ ದೊಡ್ಡ ಸಿಮೆಂಟ್ ತುಂಡುಗಳು ಕೆಳಗೆ ರಸ್ತೆಗೆ ಬೀಳುತ್ತಿರುವುದು ಸವಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಈ ಪ್ಲೈಓವರ್‌ನ ಸಮರ್ಪಕ ನಿರ್ವಹಣೆ ಇಲ್ಲದಿರುವುದಕ್ಕೆ ಇಲ್ಲಿನ ದುರಾವಸ್ಥೆಯೇ ಸಾಕ್ಷಿಯಾಗಿದೆ. ಫ್ಲೈಓವರ್‌ನ ಗೋಡೆ ಹಾಗೂ ಜಾಯಿಂಟ್‌ಗಳ ಮಧ್ಯೆ ಆಲದ ಗಿಡಗಳು ಬೆಳೆದು ನಿಂತಿವೆ. ಈ ಆಲದ ಮರದ ಬೇರುಗಳು ಪ್ಲೈಓವರ್‌ನ ಒಳಭಾಗಕ್ಕೆ ಇಳಿದು ಇಡೀ ಸಿಮೆಂಟ್ ರಚನೆಯನ್ನು ದುರ್ಬಲಗೊಳಿಸುತ್ತಿವೆ. ಬೇರುಗಳ ಒತ್ತಡಕ್ಕೆ ಸಿಮೆಂಟ್ ಕಾಂಕ್ರೀಟ್ ಬಿರುಕು ಬಿಟ್ಟು, ತುಂಡು ತುಂಡಾಗಿ ಕಳಚಿಕೊಳ್ಳುತ್ತಿದೆ.

ಕರಾವಳಿಯಲ್ಲಿ ಆರಂಭವಾಗಿರುವ ಮಳೆಯಿಂದಾಗಿ ಪ್ಲೈಓವರ್ ಮತ್ತಷ್ಟು ಹಾನಿಗೊಳಗಾಗಿದ್ದು, ನಿನ್ನೆ ಮತ್ತು ಇಂದು ಒಂದೇ ಸಮನೆ ಸಿಮೆಂಟ್ ತುಂಡುಗಳು ಕೆಳಗೆ ಬಿದ್ದಿವೆ. ನಿನ್ನೆ ಭಾರಿ ಗಾತ್ರದ ಸಿಮೆಂಟ್ ಬ್ಲಾಕ್ ಒಂದು ಸಾರ್ವಜನಿಕರು ಸಂಚರಿಸುವ ರಸ್ತೆಗೆ ಧಾವಂತದಿಂದ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ದೊಡ್ಡ ದುರಂತವೊಂದು ತಪ್ಪಿದೆ. ಇಂದು ಕೂಡ ಸಿಮೆಂಟ್ ಪಕಳೆಗಳು ಉದುರುತ್ತಲೇ ಇದ್ದು, ಹೆದ್ದಾರಿ ಸಾವು-ನೋವಿನ ಜೂಜಾಟದ ಕೇಂದ್ರದಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಆವರಿಸಿದ ಭೀತಿ
ಈ ಪ್ಲೈಓವರ್ ಅಡಿಯಿಂದ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮೇಲಿನಿಂದ ಯಾವಾಗ ಸಿಮೆಂಟ್ ಬಂಡೆ ತಲೆಮೇಲೆ ಬೀಳುತ್ತದೋ ಎಂಬ ಭೀತಿಯಲ್ಲೇ ದ್ವಿಚಕ್ರ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುತ್ತಿದ್ದಾರೆ. ಬರೀ ಬೈಕ್ ಸವಾರರಷ್ಟೇ ಅಲ್ಲದೆ, ಕೆಳಗೆ ಸಾಗುವ ದೊಡ್ಡ ದೊಡ್ಡ ವಾಹನಗಳಿಗೂ ಇದು ತೀವ್ರ ಆತಂಕ ತಂದೊಡ್ಡಿದೆ. ಇತ್ತೀಚೆಗಷ್ಟೇ ಗುತ್ತಿಗೆದಾರರು ಕೋಟಿ ಕೋಟಿ ಲೂಟಿ ಮಾಡಿ ನಿರ್ಮಿಸಿದ ಪ್ಲೈಓವರ್ ಇಷ್ಟು ಬೇಗ ಹೀಗೆ ಉದುರಿ ಬೀಳುತ್ತಿದ್ದರೆ ಸಾರ್ವಜನಿಕರ ಗತಿ ಏನು? ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ನಿದ್ರಿಸುತ್ತಿರುವ ಹೆದ್ದಾರಿ ಇಲಾಖೆ!
ಸ್ಥಳೀಯ ಸಮಾಜಸೇವಕ ಹಾಗೂ ರಿಕ್ಷಾ ಚಾಲಕ, ಆಪತ್ಬಾಂಧವ ಸಮಾಜ ಸೇವಾ ಸಂಘ (ರಿ.)ದ ಉಮೇಶ್ ದೇವಾಡಿಗ ಇಡ್ಯಾ ಅವರು ಈ ಅಪಾಯಕಾರಿ ದುರಾವಸ್ಥೆಯನ್ನು ಕಂಡು ತಕ್ಷಣವೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯ (NHAI) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸ್ಥಳದಲ್ಲೇ ನಿಂತು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಈ ಭಾಗದಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ಜಾಗೃತಿ ಮೂಡಿಸಿದ್ದಾರೆ. ಉಮೇಶ್ ಇಡ್ಯಾ ಅವರ ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಹೆದ್ದಾರಿ ಇಲಾಖೆಯ ಬೇಜವಾಬ್ದಾರಿ ಅಧಿಕಾರಿಗಳು ಮಾತ್ರ ಇದುವರೆಗೆ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಆಪತ್ಬಾಂಧವ ಆಕ್ರೋಶ
ಆಪತ್ಬಾಂಧವ ಸಮಾಜ ಸೇವಾ ಸಂಘ (ರಿ.) ಸುರತ್ಕಲ್ ಇದರ ಸಂಘಟನೆಯ ನಿಯೋಗವು, ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಉಮೇಶ್ ದೇವಾಡಿಗ ಇಡ್ಯಾ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಹೆದ್ದಾರಿಯ ಅಪಘಾತದ ತಾಣಗಳು ಹಾಗೂ ಅವೈಜ್ಞಾನಿಕ ಡಿವೈಡರ್ ತಿರುವುಗಳ ಕುರಿತು ತಕ್ಷಣವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ಆದಷ್ಟು ಬೇಗನೆ ಸರ್ವಿಸ್ ರಸ್ತೆಯ ನಿರ್ಮಾಣ, ಅಗಲೀಕರಣ, ಆಟೋಮ್ಯಾಟಿಕ್ ಟ್ರಾಫಿಕ್ ಸಿಗ್ನಲ್, ಎಚ್ಚರಿಕೆಯ ನಾಮಫಲಕ ಹಾಗೂ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಬೇಕು ಎಂದು ಕಳೆದ ಹಲವಾರು ತಿಂಗಳಿನಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಉಮೇಶ್ ದೇವಾಡಿಗ ಇಡ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.”

error: Content is protected !!