ಕೊನೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಅಣ್ಣಾಮಲೈ?

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಭಾರಿ ಸಂಚಲನ ಸೃಷ್ಟಿಯಾಗಿದೆ. ತಮಿಳುನಾಡು ಬಿಜೆಪಿಯ ಮಾಜಿ ಸಿಂಗಂ ಕೆ. ಅಣ್ಣಾಮಲೈ ಅವರು ಬಿಜೆಪಿಗೆ ಅಧಿಕೃತವಾಗಿ ಗುಡ್‌ಬೈ ಹೇಳಲಿದ್ದಾರೆ ಎಂಬ ವದಂತಿಗಳು ಈಗ ನಿಜವಾಗುವ ಮುಸ್ಸೂಚನೆ ಸಿಕ್ಕಿದೆ. ದೆಹಲಿಯಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸರಣಿ ಸಭೆಗಳ ನಡುವೆ, ಅಣ್ಣಾಮಲೈ ಅವರು ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರಿಗೆ ಸಲ್ಲಿಸಿದ್ದಾರೆ ಎಂಬ ದಟ್ಟವಾದ ವರದಿಗಳು ಕೇಳಿಬರುತ್ತಿವೆ.

ಈ ರಾಜೀನಾಮೆ ಪ್ರಕ್ರಿಯೆಯ ಬಗ್ಗೆ ಅಣ್ಣಾಮಲೈ ಆಗಲಿ ಅಥವಾ ಬಿಜೆಪಿ ಹೈಕಮಾಂಡ್ ಆಗಲಿ ಸದ್ಯಕ್ಕೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಹಾಕಿಲ್ಲ. ಆದರೆ, ದೆಹಲಿಯ ರಾಜಕೀಯ ವಲಯದಿಂದ ಸಿಗುತ್ತಿರುವ ಮಾಹಿತಿಗಳ ಪ್ರಕಾರ, ಅಣ್ಣಾಮಲೈ ಅವರು ಬಿಜೆಪಿಯಿಂದ ಸಂಪೂರ್ಣವಾಗಿ ಹೊರಬಂದು ಸ್ವತಂತ್ರ ರಾಜಕೀಯ ಹಾದಿ ಹಿಡಿಯುವುದು ಈಗ ಬಹುತೇಕ ಖಚಿತ ಎನ್ನಲಾಗುತ್ತಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

 

ಕಳೆದ ಕೆಲವು ತಿಂಗಳುಗಳಿಂದಲೇ ಅಣ್ಣಾಮಲೈ ಮತ್ತು ಬಿಜೆಪಿ ಕೇಂದ್ರ ನಾಯಕರ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯಗಳು ಮೂಡಿದ್ದವು. ಮುಖ್ಯವಾಗಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ (AIADMK) ನಡುವೆ ನಡೆದ ಸೀಟು ಹಂಚಿಕೆ ಒಪ್ಪಂದದ ಕೆಲವು ನಿರ್ಧಾರಗಳು ಅಣ್ಣಾಮಲೈ ಅವರಿಗೆ ತೀವ್ರ ಅಸಮಾಧಾನ ತಂದಿದ್ದವು. ಇದೇ ಕಾರಣಕ್ಕೆ ಅವರು ಚುನಾವಣಾ ಕಣದಿಂದಲೂ ದೂರ ಉಳಿದಿದ್ದರು. ಇದರ ಬೆನ್ನಲ್ಲೇ ಕೇಂದ್ರದ ಭಾಷಾ ನೀತಿಯನ್ನು ಬಹಿರಂಗವಾಗಿ ವಿರೋಧಿಸಿದ್ದ ಅವರು, ತಾವು ಪಕ್ಷದ ಸಿದ್ಧಾಂತಕ್ಕಿಂತ ತಮಿಳುನಾಡಿನ ಜನರ ನಿಲುವಿಗೆ ಬದ್ಧ ಎಂಬುದನ್ನು ಸಾಬೀತುಪಡಿಸಿದ್ದರು. ಇದು ಅವರ ರಾಜೀನಾಮೆಗೆ ಪ್ರಮುಖ ಪ್ರೇರಣೆಯಾಗಿದೆ ಎನ್ನಲಾಗಿದೆ.

ಹೊಸ ಪಕ್ಷದತ್ತ ಅಣ್ಣಾಮಲೈ ಚಿತ್ತ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾದ ವರದಿಗಳ ಬೆನ್ನಲ್ಲೇ, ಅಣ್ಣಾಮಲೈ ಅವರ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಅವರ ಆಪ್ತ ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಹೊಸದೊಂದು ಜನತಾ ಚಳುವಳಿಯನ್ನು ಆರಂಭಿಸಲಿದ್ದು, ಅದು ಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳಲಿದೆ.

ಸದ್ಯ ತಮಿಳುನಾಡು ರಾಜಕೀಯದಲ್ಲಿ ನಟ ವಿಜಯ್ ಅವರ ʻಟಿವಿಕೆ’ (TVK) ಪಕ್ಷದ ಎಂಟ್ರಿಯಿಂದ ದೊಡ್ಡ ಬದಲಾವಣೆ ಗಾಳಿ ಬೀಸುತ್ತಿದ್ದು, ಅಣ್ಣಾಮಲೈ ಕೂಡ ತಮ್ಮದೇ ಆದ ಸ್ವತಂತ್ರ ವೇದಿಕೆ ಸೃಷ್ಟಿಸಲು ಸಜ್ಜಾಗಿದ್ದಾರೆ. ದೆಹಲಿಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ಹೊಸ ಪಕ್ಷದ ಬಗ್ಗೆ ಪ್ರಶ್ನಿಸಿದಾಗ, “ದಯವಿಟ್ಟು ಕಾಯಿರಿ, ಇನ್ನೆರಡು ದಿನಗಳಲ್ಲಿ ಎಲ್ಲವನ್ನೂ ಕುಳಿತು ಮಾತನಾಡೋಣ” ಎಂದು ಅಣ್ಣಾಮಲೈ ಹೇಳಿರುವುದು ಅವರ ಸ್ವತಂತ್ರ ರಾಜಕೀಯ ಪಯಣದ ಮುನ್ಸೂಚನೆಯನ್ನು ಸ್ಪಷ್ಟಪಡಿಸಿದೆ.

error: Content is protected !!