ರಾಜ್ಯಪಾಲರಿಗಾಗಿ ರಸ್ತೆ ಬಂದ್‌ ಮಾಡಿದ ಪೊಲೀಸರು: ಗರ್ಭಿಣಿ ಪತ್ನಿ ಒದ್ದಾಟ ಕಂಡು ರಸ್ತೆಯಲ್ಲೇ ಧರಣಿ ಕುಳಿತ ಪತಿ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಗತ್ಪ್ರಸಿದ್ಧ. ಇದರ ನಡುವೆ ವಿಐಪಿಗಳ (VIP) ಸಂಚಾರಕ್ಕಾಗಿ ರಸ್ತೆಗಳನ್ನು ಬ್ಲಾಕ್ ಮಾಡಿದರೆ ಜನಸಾಮಾನ್ಯರ ಆಕ್ರೋಶ ಹದ್ದು ಮೀರುತ್ತದೆ ಎಂಬುದಕ್ಕೆ ಐತಿಹಾಸಿಕ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಕಾರುಗಳ ಸಾಲು (ಕಾನ್ವಾಯ್) ಸಾಗಲು ಪೊಲೀಸರು ರಸ್ತೆ ಸಿಗ್ನಲ್ ಬಂದ್ ಮಾಡಿದ್ದರಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬರು, ತಮ್ಮ ಗರ್ಭಿಣಿ ಪತ್ನಿಯೊಂದಿಗೆ ರಸ್ತೆ ಮಧ್ಯದಲ್ಲೇ ಕುಳಿತು ‘ಗಾಂಧಿ ಮಾರ್ಗ’ದಲ್ಲಿ ವಿಶಿಷ್ಟ ಪ್ರತಿಭಟನೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ರಾಜ್ಯಪಾಲರ ಕಾನ್ವಾಯ್‌ಗಾಗಿ ದೀರ್ಘಕಾಲ ಟ್ರಾಫಿಕ್ ನಿಲ್ಲಿಸಲಾಗಿತ್ತು. ಈ ವೇಳೆ ತನ್ನ ಗರ್ಭಿಣಿ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರೊಬ್ಬರು ತೀವ್ರ ಬೇಸತ್ತು, ಕಾರಿನಿಂದ ಕೆಳಗಿಳಿದು ನೇರವಾಗಿ ರಸ್ತೆ ಮಧ್ಯದಲ್ಲೇ ಧರಣಿ ಕುಳಿತರು. ರಾಜಕಾರಣಿಗಳು ಮತ್ತು ಅಧಿಕಾರಿಗಳ ಸಮಯ ಎಷ್ಟು ಅಮೂಲ್ಯವೋ, ಸಾಮಾನ್ಯ ನಾಗರಿಕರ ಸಮಯವೂ ಅಷ್ಟೇ ಬೆಲೆಬಾಳುವಂತದ್ದು ಎಂದು ಅವರು ಪಟ್ಟು ಹಿಡಿದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

 

ಈ ವೇಳೆ ಸ್ಥಳದಲ್ಲಿದ್ದ ಟ್ರಾಫಿಕ್ ಇನ್ಸ್‌ಪೆಕ್ಟರ್ ಮತ್ತು ಪ್ರತಿಭಟನಾಕಾರನ ನಡುವೆ ನಡೆದ ತೀಕ್ಷ್ಣ ಸಂಭಾಷಣೆ ಹೀಗಿದೆ:

ಪ್ರತಿಭಟನಾಕಾರ: “ನನ್ನ ಪತ್ನಿ ಗರ್ಭಿಣಿ ಇದ್ದಾಳೆ. ನಮಗೂ ಕೆಲಸ ಇರುತ್ತೆ ಅಲ್ವಾ?”

ಟ್ರಾಫಿಕ್ ಪೊಲೀಸ್: “ಬದಿಗೆ ಸರಿಯಿರಿ, ಅಲ್ಲಿ ಹೋಗಿ ನಿಲ್ಲುಕೊಳ್ಳಿ.”

ಪ್ರತಿಭಟನಾಕಾರ: “ನನ್ನ ಹೆಂಡತಿ ಪ್ರೆಗ್ನೆಂಟ್ ಇದ್ದಾಳೆ. ಯಾಕೆ ಸಿಗ್ನಲ್ ಬ್ಲಾಕ್ ಮಾಡಿದ್ದೀರಾ? ಗವರ್ನರ್ ವಿಐಪಿ ಅಂದಾಕ್ಷಣ ನಾವು ಯಾರೂ ಅಲ್ವಾ?”

ಟ್ರಾಫಿಕ್ ಪೊಲೀಸ್: “ನೀವು ಕೂಡ ವಿಐಪಿನೇ. ಈಗ ಎದ್ದು ಪಕ್ಕಕ್ಕೆ ಹೋಗಿ. ಎಳ್ತೀರಾ ಇಲ್ವಾ?”

ಪ್ರತಿಭಟನಾಕಾರ: “ಇಲ್ಲ, ಏಳಲ್ಲ.”

ಪೊಲೀಸರು ಎಷ್ಟೇ ಒತ್ತಾಯಿಸಿದರೂ ಆ ವ್ಯಕ್ತಿ ರಸ್ತೆಯಿಂದ ಕದಲಲು ನಿರಾಕರಿಸಿದರು. ಕೊನೆಗೆ ಜನದಟ್ಟಣೆಯ ನಡುವೆಯೇ ರಾಜ್ಯಪಾಲರ ಕಾನ್ವಾಯ್ ಪಾಸ್ ಆಗಿದ್ದು, ನಂತರ ಪೊಲೀಸರು ಆ ವ್ಯಕ್ತಿಯನ್ನು ಹೇಗೆ ಸಮಾಧಾನಪಡಿಸಿ ರಸ್ತೆಯಿಂದ ಕಳುಹಿಸಿದರು ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ಆ ವ್ಯಕ್ತಿಯ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ.

error: Content is protected !!