ಕೇರಳ: ಹಾವಿನ ಕಡಿತವನ್ನು ಸಾಮಾನ್ಯ ಇರುವೆ ಕಡಿತವೆಂದು ನಿರ್ಲಕ್ಷಿಸಿದ 13 ವರ್ಷದ ಶಾಲಾ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಕೇರಳದ ಕೊಚ್ಚಿ ಸಮೀಪದ ಅರೂರ್‌ನಲ್ಲಿ ನಡೆದಿದೆ. ಅರೂರ್ ನಿವಾಸಿಯಾದ ನಿಯಾ ಲೆನಿನ್ ಮೃತಪಟ್ಟ ದುರ್ದೈವಿ.

ಸ್ಥಳೀಯ ದೇವಸ್ಥಾನದ ಅರ್ಚಕರ ಮಗಳಾದ ನಿಯಾ, ಕಳೆದ ಮೇ 7ರಂದು ಸಂಜೆ ತನ್ನ ಸ್ನೇಹಿತರೊಂದಿಗೆ ನೃತ್ಯ ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಂಜೆ 7:30ರ ಸುಮಾರಿಗೆ ದಾರಿಯಲ್ಲಿ ಹೋಗುತ್ತಿದ್ದಾಗ ಆಕೆಯ ಕಾಲಿಗೆ ತೀವ್ರವಾದ ನೋವು ಕಾಣಿಸಿಕೊಂಡಿದೆ. ಆದರೆ, ನೃತ್ಯ ಪ್ರದರ್ಶನದ ತೀವ್ರ ಉತ್ಸಾಹದಲ್ಲಿದ್ದ ಬಾಲಕಿ, ಅದು ದೊಡ್ಡ ಕಪ್ಪು ಇರುವೆ ಕಡಿದಿರಬಹುದು ಎಂದು ಭಾವಿಸಿದ್ದಾಳೆ. ಸುತ್ತಮುತ್ತಲಿನ ಜನರು ಹಾವಿನ ಕಡಿತವಿರಬಹುದು ಎಂದು ಶಂಕಿಸಿ ತಪಾಸಣೆ ಮಾಡಲು ಮುಂದಾದರೂ, ಆಕೆ ಅದು ಇರುವೆ ಕಡಿತವೇ ಎಂದು ಹಠ ಹಿಡಿದು ಮನೆಗೆ ಮರಳಿದ್ದಾಳೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.

ಮನೆಗೆ ಬಂದ ಮೇಲೂ ಬಾಲಕಿ ಕಾಲಿಗೆ ಅರಿಶಿನ ಪುಡಿ ಹಚ್ಚಿಕೊಳ್ಳುತ್ತಾ, “ಇರುವೆ ಅಥವಾ ಕಪ್ಪೆ ಏನಾದರೂ ತಾಗಿರಬಹುದು” ಎಂದು ಕುಟುಂಬಸ್ಥರಿಗೂ ಹೇಳಿದ್ದಾಳೆ. ಕಾಲಿನ ಮೇಲೆ ಯಾವುದೇ ಹಾವಿನ ಹಲ್ಲಿನ ಪ್ರಮುಖ ಗುರುತುಗಳು ಇಲ್ಲದ ಕಾರಣ ಹೆತ್ತವರು ಕೂಡ ಮಗಳ ಮಾತನ್ನು ನಂಬಿದ್ದಾರೆ. ಆದರೆ, ಕೆಲವೇ ಗಂಟೆಗಳಲ್ಲಿ ವಿಷವು ಇಡೀ ದೇಹಕ್ಕೆ ಹರಡಿದ್ದು ಬಾಲಕಿ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ.
ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ವಿಷವು ದೇಹದ ಪ್ರಮುಖ ಅಂಗಾಂಗಗಳಿಗೆ ವ್ಯಾಪಿಸಿತ್ತು. ಕಳೆದ 24 ದಿನಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕಿ, ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾಳೆ. ಸೋಮವಾರದಿಂದ ಆಕೆಯ 8ನೇ ತರಗತಿಯ ಹೊಸ ಶೈಕ್ಷಣಿಕ ವರ್ಷ ಆರಂಭವಾಗಬೇಕಿತ್ತಾದರೂ, ಅದಕ್ಕೂ ಮುನ್ನವೇ ಆಕೆ ಇಹಲೋಕ ತ್ಯಜಿಸಿರುವುದು ಇಡೀ ಗ್ರಾಮವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.